ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕಾರ್ಯಕರ್ತರ ಟಾರ್ಗೆಟ್: ಜೆಡಿಎಸ್ ಆಕ್ರೋಶ

ಶಾಸಕರ ವಿಡಿಯೊ ಪ್ರಕರಣ: ಸಿ.ಇ.ಎನ್ ಠಾಣೆ ಇನ್‌ಸ್ಪೆಕ್ಟರ್ ಜೊತೆ ಮುಖಂಡರ ವಾಗ್ವಾದ
Published 9 ಮೇ 2024, 12:53 IST
Last Updated 9 ಮೇ 2024, 12:53 IST
ಅಕ್ಷರ ಗಾತ್ರ

ರಾಮನಗರ: ಕಾರ್ಯಕರ್ತೆಯೊಬ್ಬರ ಜೊತೆ ಶಾಸಕರೊಬ್ಬರು ಮಾತನಾಡಿದ ವಾಟ್ಸ್ಆ್ಯಪ್ ಕಾಲ್‌ ವಿಡಿಯೊ ಹಂಚಿಕೊಂಡ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ಮುಖಂಡರು, ನಗರದ ಸಿ.ಇ.ಎನ್ ಪೊಲೀಸ್ ಠಾಣೆಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು.

ಜೆಡಿಎಸ್‌ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದಲ್ಲಿ ಠಾಣೆಗೆ ಬಂದ ಮುಖಂಡರು, ಇನ್‌ಸ್ಪೆಕ್ಟರ್ ಪುಟ್ಟೇಗೌಡ ಅವರನ್ನು ಭೇಟಿ ಮಾಡಿದರು. ‘ವಿಡಿಯೊ ಪ್ರಕರಣದಲ್ಲಿ ಪಕ್ಷದ ಕಾರ್ಯಕರ್ತರಾದ ಹಾರೋಹಳ್ಳಿಯ ಶೇಷಾದ್ರಿ ರಾಮ್ ಮತ್ತು ರಾಮನಗರದ ಅರಳಿಮರದದೊಡ್ಡಿಯ ಶಶಿಕುಮಾರ್ ಅವರನ್ನು ಬಂಧಿಸಿರುವುದು ಸರಿಯಲ್ಲ. ನೀವು ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದ್ದೀರಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಮುಖಂಡರು ದನಿಗೂಡಿಸಿದರು.

‘ನಾವು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಕಾನೂನು ಪ್ರಕಾರವೇ ತನಿಖೆ ನಡೆಸಿದ್ದೇವೆ. ಸಂಬಂಧಪಟ್ಟವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದ ಬಳಿಕವೇ ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಹಾಗಿದ್ದರೆ, ‘ರಾತ್ರೋರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸುವ ಅಗತ್ಯವ ತುರ್ತು ಏನಿತ್ತು?’ ಎಂದು ಕೆಲ ಮುಖಂಡರು ಏರುದನಿಯಲ್ಲಿ ಮಾತನಾಡಿದಾಗ, ಪೊಲೀಸರು ಮತ್ತು ಮುಖಂಡರ ನಡುವೆ ವಾಗ್ವಾದ ನಡೆಯಿತು. ನಂತರ, ರಂಗನಾಥ್ ಮತ್ತು ಇನ್‌ಸ್ಪೆಕ್ಟರ್ ಎಲ್ಲರನ್ನೂ ಸಮಾಧಾನಪಡಿಸಿದರು.

ಬೇರೆ ಹೆಸರಿದ್ದರೂ ಬಂಧನ: ‘ವಿಡಿಯೊಗೆ ಸಂಬಂಧಿಸಿದಂತೆ ಮೇ 1ರಂದು ಕಾರ್ಯಕರ್ತೆ ನೀಡಿದ ದೂರಿನಲ್ಲಿ ತಮ್ಮಣ್ಣಗೌಡ ಗುಂಡ್ಕಲ್ ಎಂಬಾತನ ಹೆಸರನ್ನು ನಮೂದಿಸಿದ್ದಾರೆ. ಆದರೆ, ಪೊಲೀಸರು ಆತನನ್ನ ಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರವಾಗಿ ಸಕ್ರಿಯವಾಗಿದ್ದಾರೆಂಬ ಕಾರಣಕ್ಕಾಗಿ ಶೇಷಾದ್ರಿ ಮತ್ತು ಶಶಿ ಅವರನ್ನು ಬಂಧಿಸಿ, ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ’ ಎಂದು ರಂಗನಾಥ್ ಆರೋಪಿಸಿದರು.

‘ಇಷ್ಟಕ್ಕೂ ಶಾಸಕರೇ ಅದು ತನ್ನದೇ ವಿಡಿಯೊ ಎಂದು ಒಪ್ಪಿಕೊಂಡಿದ್ದಾರೆ. ಕಾರ್ಯಕರ್ತೆ ಸಹ ತಮ್ಮದು ತಂದೆ–ಮಗಳ ರೀತಿಯ ಸಂಬಂಧ ಎಂದು ಹೇಳಿದ್ದಾರೆ. ಹೀಗಿದ್ದರೂ, ಯಾರೋ ಮಾಡಿದ ತಪ್ಪಿಗೆ ನಮ್ಮವರನ್ನು ಬಂಧಿಸಿರುವುದು ಎಷ್ಟು ಸರಿ? ನಮ್ಮ ಪಕ್ಷದ ನಾಯಕರ ವಿರುದ್ಧವೂ ಆಕ್ಷೇಪಾರ್ಹವಾಗಿ ಕಾಂಗ್ರೆಸ್‌ನವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಅವರ ವಿರುದ್ದವೂ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದರು.

ಅದಕ್ಕೆ ಇನ್‌ಸ್ಪೆಕ್ಟರ್, ದಾಖಲೆಯೊಂದಿಗೆ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಗ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಶಾಸಕ ಎಚ್‌.ಡಿ. ರೇವಣ್ಣ ಹಾಗೂ ಸಂಸದರ ಪ್ರಜ್ವಲ್ ರೇವಣ್ಣ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ನ ವಕೀಲ ವಿ. ನರಸಿಂಹಮೂರ್ತಿ, ಕಾಂಗ್ರೆಸ್‌ನ ಪುರುಷೋತ್ತಮ ಎಚ್.ಎಂ. ಮತ್ತು ಶ್ರೀನಿವಾಸ್ ಎಂಬುವರ ವಿರುದ್ಧ ದೂರು ಕೊಟ್ಟರು. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಭರವಸೆ ನೀಡಿದರು.

ಜೆಡಿಎಸ್ ವಕ್ತಾರ ನರಸಿಂಹಮೂರ್ತಿ, ಮುಖಂಡರಾದ ಜಿ.ಟಿ. ಕೃಷ್ಣ, ಗೂಳಿ ಕುಮಾರ್, ಜಯಕುಮಾರ್, ಮಂಜುನಾಥ್ ಸೇರಿದಂತೆ ಬಿಜೆಪಿಯ ಕೆಲ ಮುಖಂಡರು ಇದ್ದರು.

ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗಿದೆ ಎಂದು ಆರೋಪಿಸಿ ಗುರುವಾರ ರಾಮನಗರದ ಸಿ.ಇ.ಎನ್ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ನೀಡಿದ ದೂರಿನ ಪ್ರತಿಯನ್ನು ಪ್ರದರ್ಶಿಸಿದರು. ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್ ವಕ್ತಾರ ನರಸಿಂಹಮೂರ್ತಿ ಹಾಗೂ ಇತರರು ಇದ್ದಾರೆ
ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗಿದೆ ಎಂದು ಆರೋಪಿಸಿ ಗುರುವಾರ ರಾಮನಗರದ ಸಿ.ಇ.ಎನ್ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ನೀಡಿದ ದೂರಿನ ಪ್ರತಿಯನ್ನು ಪ್ರದರ್ಶಿಸಿದರು. ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್ ವಕ್ತಾರ ನರಸಿಂಹಮೂರ್ತಿ ಹಾಗೂ ಇತರರು ಇದ್ದಾರೆ

‘ರಾಜಕೀಯ ಪ್ರೇರಿತ ಪ್ರಕರಣ’

‘ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು ಜೆಡಿಎಸ್ ಕಾರ್ಯಕರ್ತರ ಬಂಧನದ ಹಿಂದೆ ನಮ್ಮ ಬಾಯಿ ಮುಚ್ಚಿಸುವ ದುರುದ್ದೇಶವಿದೆ. ದೂರಿನಲ್ಲಿ ಹೆಸರಿಲ್ಲದಿದ್ದರೂ ಪೊಲೀಸರು ಅವರಿಬ್ಬರನ್ನು ಬಂಧಿಸುವ ಅಗತ್ಯವೇನಿತ್ತು. ಪೊಲೀಸರು ಯಾವುದೇ ಪ್ರಕರಣದಲ್ಲಿ ಪಾರದರ್ಶಕವಾಗಿ ತನಿಖೆ ನಡೆಸಿ ದೂರುದಾರರು ಯಾರ ಮೇಲೆ ಆರೋಪ ಮಾಡಿದ್ದಾರೊ ಅವರನ್ನು ಕರೆದು ವಿಚಾರಣೆ ನಡೆಸಿ ಬಂಧಿಸಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು’ ಎಂದು ಎ.ಪಿ. ರಂಗನಾಥ್ ಹೇಳಿದರು. ‘ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದರು’ ‘ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಯೇ ಹಾರೋಹಳ್ಳಿಯ ಶೇಷಾದ್ರಿ ರಾಮ್ ಮತ್ತು ಅರಳಿಮರದದೊಡ್ಡಿ ಶಶಿಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಬ್ಬರೂ ಶಾಸಕರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್‌ ಜೊತೆಗೆ ವಾಟ್‌ಆ್ಯಪ್‌ಲ್ಲಿ ಸಹ ಹಂಚಿಕೊಂಡಿದ್ದರು’ ಎಂದು ಸಿ.ಇ.ಎನ್ ಪೊಲೀಸರು ತಿಳಿಸಿದರು.

ಮತದಾನ ವಿಡಿಯೊದಲ್ಲೂ ಶಶಿ

ಆರೋಪಿ ಬಂಧಿತ ಶಶಿಕುಮಾರ್ ಏ. 26ರಂದು ನಡೆದಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾನದಂದು ಮತದಾನದ ವಿಡಿಯೊ ಮಾಡಿ ಅಸಭ್ಯವಾಗಿ ಸನ್ನೆ ಮಾಡಿದ ಆರೋಪದಲ್ಲೂ ಆರೋಪಿಯಾಗಿದ್ದಾನೆ. ಈ ಕುರಿತು ಚುನಾವಣಾ ಕರ್ತವ್ಯದಲ್ಲಿದ್ದ ಎಫ್‌.ಎಸ್‌.ಟಿ–2 ತಂಡದ ಕಾಂತರಾಜು ಅವರು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಏ. 8ರಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಶಾಸಕರ ವಿಡಿಯೊ ಪ್ರಕರಣದಲ್ಲಿ ಸಿ.ಇ.ಎನ್ ಪೊಲೀಸರು ಆತನನ್ನು ಮತ್ತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT