ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಗುಡಿ ಕಟ್ಟಿ, ದೇವತೆ ರೂಪ ಕೊಡಬೇಕಿಲ್ಲ: ಸಾಹಿತಿ ಕೆ. ಷರೀಫಾ

Published 21 ನವೆಂಬರ್ 2023, 5:21 IST
Last Updated 21 ನವೆಂಬರ್ 2023, 5:21 IST
ಅಕ್ಷರ ಗಾತ್ರ

ರಾಮನಗರ: ‘ಕನ್ನಡಕ್ಕೆ ಗುಡಿ ಕಟ್ಟಿ, ದೇವತೆಯ ರೂಪ ಕೊಟ್ಟು ಪ್ರತಿಮೆ ಮಾಡುವುದು ಸರಿಯಲ್ಲ. ವಚನಕಾರರು, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದಿದ್ದಾರೆ. ಕನ್ನಡಕ್ಕೆ ಜಾತಿ ಮತ್ತು ಧರ್ಮದ ಹಂಗಿಲ್ಲ. ಭಾಷೆ ಎಂದರೆ ಜನ, ಜನರೆಂದರೆ ಭಾಷೆ. ಕನ್ನಡವು ಈ ನೆಲದ ಪ್ರತಿಯೊಬ್ಬರಿಗೂ ಸೇರಿದೆ’ ಎಂದು ಸಾಹಿತಿ ಕೆ. ಷರೀಫಾ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದಿಂದ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ, ಧರ್ಮ ಹಾಗೂ ಭಾಷೆ ಆಧಾರದ ಮೇಲೆ ರಾಜಕಾರಣಿಗಳು ಜನರನ್ನು ಒಡೆದಾಳುತ್ತಿದ್ದಾರೆ. ನಮ್ಮ ಶತ್ರು ಮತ್ತು ಮಿತ್ರ ಯಾರೆಂದು ಗುರುತಿಸಿ ಅವರ ವಿರುದ್ಧ ಒಗ್ಗಟ್ಟಾಗದಿದ್ದರೆ ನಮಗೆ ಉಳಿಗಾಲವಿಲ್ಲ. ಇತ್ತೀಚೆಗೆ ಪಠ್ಯಪುಸ್ತಕಗಳು ಸಹ ಕೋಮು ಸರಕಾಗುತ್ತಿವೆ. ರಾಜಕಾರಣಿಗಳು ಕೋಮು ಸೌಹಾರ್ದ ಕದಡದೆ, ಕಾಪಾಡಬೇಕು’ ಎಂದರು.

‘ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಶಾಲಾ–ಕಾಲೇಜುಗಳು ಬಾಗಿಲು ಮುಚ್ಚುತ್ತಿವೆ. ಸರ್ಕಾರಗಳು ಇವುಗಳನ್ನು ಉಳಿಸಿದರೆ, ಅದೇ ಕನ್ನಡದ ಬೆಳವಣಿಗೆಗೆ ನೀಡುವ ದೊಡ್ಡ ಕೊಡುಗೆ. ರಾಜ್ಯದಲ್ಲಿ 409 ಶಾಲೆಗಳು ಸ್ವಂತ ಕಟ್ಟಡವಿಲ್ಲದೆ ನರಳುತ್ತಿವೆ. ಇರುವ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಬುರ್ಖಾ, ಪಠ್ಯದಲ್ಲಿ ಕೋಮು ವಿಷಯಗಳೇ ಸರ್ಕಾರಗಳಿಗೆ ಮುಖ್ಯವಾಗಿವೆ. ತಲೆ ಮೇಲೆ ವಸ್ತ್ರ ಹಾಕುವುದಕ್ಕೆ ರಾಜಕೀಯ ರೂಪ ಕೊಟ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಡೆಯೊಡ್ಡಬಾರದು’ ಎಂದು ಹೇಳಿದರು.

‘ವಾಸ್ತವಕ್ಕೆ ಹತ್ತಿರವಿರದ, ಬದುಕಿನ ಹೋರಾಟ ಹಾಗೂ ಸಮಾಜದ ತಲ್ಲಣಗಳಿಗೆ ಸ್ಪಂದಿಸದ ಸಾಹಿತ್ಯ ಅಂತಃಪುರದ ಸಾಹಿತ್ಯ ಎನಿಸಿಕೊಳ್ಳಲಿದೆ. ಜನಮನಕ್ಕೆ ಸ್ಪಂದಿಸದ ಸಾಹಿತ್ಯವು ಸಮಾಜಮುಖಿಯಾಗಿರಲಿ ಸಾಧ್ಯವಿಲ್ಲ. ಕವಿ ಸದಾ ಸಮಾಜಕ್ಕೆ ತೆರೆದುಕೊಂಡಿರಬೇಕು. ಕೂಪ ಮಂಡೂಕನಾಗಿರದೆ ವಿಶ್ವದ ವಿದ್ಯಮಾನಗಳ ಅರಿವು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜಮುಖಿ ಸಾಹಿತಿಯಾಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ‌. ಉಮಾಶಂಕರ್ ಮಾತನಾಡಿ, ‘ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡ ನಮ್ಮ ಉಸಿರಾಗಿರಬೇಕು. ಪ್ರೀತಿ, ಕೋಪ ಹಾಗೂ ನೋವಿನ ಸಂದರ್ಭದಲ್ಲಿ ಮಾತೃಭಾಷೆಯಲ್ಲದೆ ಬೇರಾವುದೂ ಬಾರದು. ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬಂತೆ ಬಿಂಬಿಸಲಾಗುತ್ತಿದೆ. ಅದು ತಪ್ಪು. ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಿರುವ 22 ಭಾಷೆಗಳಲ್ಲಿ ಕನ್ನಡದಂತೆ ಹಿಂದಿಯೂ ಒಂದು. ಹಾಗಾಗಿ, ಹಿಂದಿ ಹೇರಿಕೆ ಸಲ್ಲದು’ ಎಂದರು.

ಇತಿಹಾಸ ಅಧ್ಯಾಪಕ ನಾಗಪ್ಪ, ‘ಕನ್ನಡಕ್ಕಾಗಿ ಅನೇಕ ಮಹನೀಯರು ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಜೊತೆಗೆ, ಕನ್ನಡತನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.

ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಜನಪದ ಗಾಯಕ ಹೊನ್ನಿಗಾನಹಳ್ಳಿ ಸಿದ್ದರಾಜು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.

ಕಾಲೇಜಿನ ಪ್ರಾಚಾರ್ಯೆ ಎಂ.ಜಿ. ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಸಾವಿತ್ರಿ, ಪ್ರಾಧ್ಯಾಪಕ ಡಾ. ಜೆ. ರಾಜು ಗುಂಡಾಪುರ, ಡಾ. ಸುಧಾ, ಐಕ್ಯೂಎಸಿ ಸಂಚಾಲಕಿ ಡಾ. ಮಂಜುಳಾ ಆರ್‌.ಎಸ್., ಕನ್ನಡ ಸಂಘದ ಸಂಚಾಲಕ ಡಾ. ಶಿವಲಿಂಗೇಗೌಡ ಡಿ. ಇದ್ದರು. ಉಪನ್ಯಾಸಕ ಡಾ. ಅಂಕನಹಳ್ಳಿ ಪಾರ್ಥ ನಿರೂಪಣೆ ಮಾಡಿದರು.

ಕೋಮು ಸರಕಾಗುತ್ತಿರುವ ಪಠ್ಯಪುಸ್ತಕಗಳು ಸಾಹಿತಿ ಸಮಾಜದ ತಲ್ಲಣಕ್ಕೆ ಸ್ಪಂದಿಸಬೇಕು ರಾಷ್ಟ್ರಭಾಷೆಯಲ್ಲದ ಹಿಂದಿ ಹೇರಿಕೆ ಸಲ್ಲದು
‘ಗೆಳತಿ ಕಾರಣಕ್ಕೆ ಕನ್ನಡ ಶಾಲೆ ಸೇರಿದೆ’
‘ಉರ್ದು ಪ್ರಭಾವ ಹೆಚ್ಚಾಗಿರುವ ಕಲಬುರಗಿಯ ಮುಸ್ಲಿಂ ಕುಟುಂಬದವಳಾದ ನಾನು ಆತ್ಮಿಯ ಗೆಳತಿ ಮಹಾದೇವಿಯ ಕಾರಣಕ್ಕಾಗಿ ಕನ್ನಡ ಶಾಲೆ ಸೇರಿದೆ. ನಿನ್ನ ಗಂಡ ಬರೆಯುವ ಪತ್ರ ಓದಲು ಮತ್ತು ವಾಪಸ್ ಆತನಿಗೆ ಪತ್ರ ಬರೆಯುವಷ್ಟು ಕಲಿತರೆ ಸಾಕು ಎಂದಿದ್ದ ಅಪ್ಪ 7ನೇ ತರಗತಿಗೆ ಶಾಲೆಯಿಂದ ಬಿಡಿಸಿದರು. ಆದರೂ ಹಠ ಮಾಡಿ ಓದು ಮುಂದುವರಿಸಿದೆ. ನಿತ್ಯ ಹೊಲಕ್ಕೆ ಸಗಣಿ ಹೊತ್ತು ಹಾಕಿ ಬಂದು ಶಾಲೆಗೆ ಹೋಗುತ್ತಿದ್ದೆ. ಶುಲ್ಕ ಹೊಂದಿಸಲು ಟೈಲರಿಂಗ್ ಕೆಲಸ ಮಾಡುತ್ತಿದ್ದೆ. ಕಡೆಗೆ ಎಪಿಎಂಸಿಯಲ್ಲಿ ಶೀಘ್ರ ಲಿಪಿಕಾರಳಾಗಿ ಕೆಲಸಕ್ಕೆ ಸೇರಿದೆ. ಕೆಲಸ ಜೊತೆಗೆ ಕನ್ನಡ ಕಾಯಕದಲ್ಲಿ ತೊಡಗಿಕೊಂಡೆ. ಗೋಕಾಕ ಚಳವಳಿಯಲ್ಲಿ ಸಕ್ರಿಯಳಾದೆ. ನನ್ನ ಕೆಲಸಕ್ಕೆ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂತು’ ಎಂದು ಕೆ. ಷರೀಫಾ ಅವರು ಶಾಲಾ ದಿನಗಳನ್ನು ಮೆಲುಕು ಹಾಕಿದರು. ಕನ್ನಡ ಭಾಷೆ ಹಾಗೂ ಪ್ಯಾಲೆಸ್ಟಿನ್ ಮೇಲೆ ಇಸ್ರೇಲ್ ಯುದ್ಧ ಕುರಿತು ‘ನಮ್ಮ ಹೆರಿಗೆಗೊಂದು ಸುರಕ್ಷಿತ ತಾಣ ನೀಡು ಪ್ರಭುವೇ..’ ಎಂಬ ಕವಿತೆ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT