ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2024 | ಬಹುಜನ ಹಿತಾಯ: ಬಹುಜನ ಸುಖಾಯ

ಸರ್ವ ಸಮುದಾಯ– ಕ್ಷೇತ್ರಗಳ ಅಭ್ಯುದಯದ ಆಶಯ; ರಾಮನಗರ ಜಿಲ್ಲೆಗೆ ಅಲ್ಪ ಸಿಹಿ
ಜಿ. ಶಿವಣ್ಣ
Published 17 ಫೆಬ್ರುವರಿ 2024, 8:26 IST
Last Updated 17 ಫೆಬ್ರುವರಿ 2024, 8:26 IST
ಅಕ್ಷರ ಗಾತ್ರ

ರಾಮನಗರ: ವಿಧಾನಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಮುಂಗಡಪತ್ರವನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಮುಂಗಡಪತ್ರವನ್ನು ಮಂಡಿಸಿ ವಿನೂತನ ದಾಖಲೆ ಸೃಷ್ಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ₹3,71,383 ಕೋಟಿ ಗಾತ್ರದ ಪೂರ್ಣ ಆಯವ್ಯಯ ಮಂಡಿಸಿದ್ದು, ಕೇಂದ್ರ ಸರ್ಕಾರದ ಯೋಜನೆಗಳಡಿಯಲ್ಲೇ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಹೊಸದಾಗಿ ಕೆಲ ಜನಪರ ಯೋಜನೆಗಳನ್ನು ಪ್ರಕಟಿಸಿ, ಆರ್ಥಿಕ ಸಮಾನತೆಗೆ ಒತ್ತು ನೀಡಿದ್ದಾರೆ.

ಕೃಷಿ, ನೀರಾವರಿ, ನಗರಾಭಿವೃದ್ಧಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಆದ್ಯತೆ ನೀಡಿರುವ ಮುಖ್ಯಮಂತ್ರಿ, ಹಳೆಯ ಕೆಲ ಯೋಜನೆಗಳಿಗೆ ಮರುಜೀವ ನೀಡುವುದರ ಜೊತೆಗೆ, ಹೊಸ ಕಾರ್ಯಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಪರಿಸರ ಸಂರಕ್ಷಿತ ಕೃಷಿ ಉತ್ಪಾದನೆ ಕೈಗೊಳ್ಳಲು ಸುಸ್ಥಿರ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನೆ ಇನ್ನಿತರೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ.

ದೇಶಿ ತಳಿ ಬೀಜ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ, ಅಧಿಕ ಪೌಷ್ಟಿಕಾಂಶವುಳ್ಳ ಸಿರಿಧಾನ್ಯದ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ‘ನಮ್ಮ ಮಿಲ್ಲೆಟ್’ ಯೋಜನೆ, ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಕೈಗೊಳ್ಳಲು ನರೇಗಾ ಯೋಜನೆಯಡಿಯಲ್ಲಿ 5 ಸಾವಿರ ಸಣ್ಣ ಸರೋವರಗಳ ನಿರ್ಮಾಣ, ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ದಿಟ್ಟ ಹೆಜ್ಜೆಯಾಗಿದೆ.

ರೈತರು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಕಿಸಾನ್ ಮಾಲ್‍ಗಳ ಸ್ಥಾಪನೆ. ವಾಣಿಜ್ಯ ಪುಷ್ಪ ಮಾರುಕಟ್ಟೆ ಆರಂಭಿಸಲು ಮುಂದಾಗಿರುವುದು ರೈತರ ಆರ್ಥಿಕ ಸ್ಥಿತಿ ಬಲವರ್ಧನೆಗೆ ಪೂರಕವಾಗಿವೆ.

ಮೇಕೆದಾಟು ಬಳಿ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಸ್ಥಾಪನೆಗೊಂಡಿರುವ ಪ್ರತ್ಯೇಕ ಯೋಜನಾ ವಿಭಾಗದ ಮೂಲಕ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮ ವಹಿಸಲು ಮುಂದಾಗಿದ್ದಾರೆ.

ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆ, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್‍ಲೈನ್ ಮೂಲಕ ನೀರು ಪೂರೈಸುವ ಯೋಜನೆ, ರಾಮನಗರದ ಬಳಿ ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‍ಮೆಂಟ್ ಯೋಜನೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಅಂದಾಜು ₹ 2 ಸಾವಿರ ಕೋಟಿ ಮೊತ್ತದಲ್ಲಿ ಪ್ರಸಕ್ತ ಸಾಲಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವುದು ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಅನುಕೂಲವಾಗಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸದಿರುವುದು ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಲಾಗುವುದು ಎಂದು ಹೇಳುವ ಮೂಲಕ 5 ಲಕ್ಷಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರಿಗೆ ನಿರಾಸೆ ಉಂಟು ಮಾಡಿದ್ದಾರೆ.

(ಲೇಖಕ ಅರ್ಥಶಾಸ್ತ್ರ ಪ್ರಾಧ್ಯಾಪಕ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಪದವಿಪೂರ್ವ ಕಾಲೇಜು, ರಾಮನಗರ)

ರೇಷ್ಮೆಗೆ ಪ್ರೋತ್ಸಾಹಧನ
ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ರೇಷ್ಮೆ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ₹250 ಕೋಟಿ ಮೀಸಲಿಟ್ಟಿರುವುದು ಬೈವೋಲ್ಟಿನ್ ರೇಷ್ಮೆ ಗೂಡಿಗೆ ಪ್ರತಿ ಕೆ.ಜಿ. ₹10ರಿಂದ ₹30 ಪ್ರೋತ್ಸಾಹ ಧನ ಹೆಚ್ಚಿಸಿರುವುದು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಲ್ಲಿ 10 ಸಾವಿರ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ. ದೇಶಿ ತಳಿಗಳಾದ ಅಮೃತ್ ಮಹಲ್ ಹಳ್ಳಿಕಾರ್ ಖೀಲಾರಿ ರಾಸುಗಳ ಸಂವರ್ಧನೆಗೆ ಯೋಜನೆ ರೂಪಿಸಿರುವುದು ಹಸು ಎಮ್ಮೆ ಖರೀದಿಗೆ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸುವ ರೈತ ಮಹಿಳೆಯರಿಗೆ ಸರ್ಕಾರದಿಂದಲೇ ಶೇ 6ರಷ್ಟು ಬಡ್ಡಿ ಸಹಾಯಧನ ನೀಡಲು ಮುಂದಾಗಿರುವುದು ಕೃಷಿ ಪ್ರಗತಿಗೆ ಪ್ರೋತ್ಸಾಹ ನೀಡುವ ವಿನೂತನ ಯೋಜನೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT