ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸಮಗ್ರ ಕೃಷಿಯಿಂದ ಆದಾಯದ ಖುಷಿ: 5 ಎಕರೆಯಲ್ಲಿ ತರಹೇವಾರಿ ಬೆಳೆ

ಹೆಚ್ಚುವರಿ ಆದಾಯಕ್ಕೆ ಹೈನುಗಾರಿಕೆ, ಅರಣ್ಯ ಕೃಷಿ
Published 5 ಮಾರ್ಚ್ 2024, 5:31 IST
Last Updated 5 ಮಾರ್ಚ್ 2024, 5:31 IST
ಅಕ್ಷರ ಗಾತ್ರ

ರಾಮನಗರ: ಆ ಜಮೀನಿಗೆ ಹೋದರೆ ತರಹೇವಾರಿ ಬೆಳೆಗಳ ದರ್ಶನವಾಗುತ್ತದೆ. ಕಣ್ಣು ಹಾಯಿಸಿದತ್ತೆಲ್ಲಾ ಹಸುರು ಸೊಬಗು, ಫಲವತ್ತಾದ ಮಣ್ಣು, ಹಣ್ಣು–ಕಾಯಿಯಿಂದ ಬಾಗಿದ ಮರಗಳು, ಹಸು, ಟಗರು, ಕುರಿ–ಕೋಳಿಗಳು... ಹೀಗೆ ಆ ಜಮೀನಿನಲ್ಲಿ ನಿಂತ ಅಷ್ಟೂ ಹೊತ್ತು ಸಮಗ್ರ ಕೃಷಿ, ಅರಣ್ಯ ಕೃಷಿ ಜೊತೆಗೆ ಹೈನುಗಾರಿಕೆಯ ದರ್ಶನವಾಗುತ್ತದೆ.

ತಾಲ್ಲೂಕಿನ ಕುಂಬಾಪುರ ಗ್ರಾಮದ ಪ್ರಗತಿಪರ ರೈತ ಕುಂಬಾಪುರ ಬಾಬು ಅವರ ಜಮೀನಿನಲ್ಲಿ ಕಂಡುಬಂದ ದೃಶ್ಯವಿದು. ಶಿಕ್ಷಕರಾಗಿದ್ದ ಬಾಬು, ಪಾರಂಪರಿಕ ಕಸುಬಿಗೆ ಹೊಸ ರೂಪ ಕೊಟ್ಟಿದ್ದಾರೆ. ಸಮಗ್ರ ಕೃಷಿಯಲ್ಲಿ ಚಮತ್ಕಾರ ಮಾಡಿದ್ದಾರೆ. ಕೃಷಿ ಮಾಡಬೇಕೆಂಬ ಮನಸ್ಸುಳ್ಳವರಿಗೆ ಲಾಭದಾಯಕ ಕೃಷಿಯ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ.

ಬಾಬು ಅವರ ಜಮೀನಿನಲ್ಲಿ ಮಾವು, ತೆಂಗು, ಪಪ್ಪಾಯ, ಕಾಳು ಮೆಣಸು, ರೇಷ್ಮೆ, ಅಂಜೂರ, ರಾಮಫಲ, ಸೀಬೆ, ನಿಂಬೆ, ಸೊಪ್ಪು, ಕ್ಯಾಪ್ಸಿಕಂ, ನುಗ್ಗೆಕಾಯಿ ಬೆಳೆಗಳಿವೆ. ಹಸು, ಕುರಿ, ಟಗರು, ನಾಟಿ ಕೋಟಿ ಸಾಕಾಣಿಕೆಯ ಶೆಡ್‌ಗಳಿವೆ. ಸಮಗ್ರ ಕೃಷಿ ಮತ್ತು ಹೈನುಗಾರಿಕೆಯನ್ನು ಒಟ್ಟೊಟ್ಟಿಗೆ ಮಾಡುತ್ತಿರುವ ಬಾಬು, ಕೈ ತುಂಬಾ ಆದಾಯ ಗಳಿಸುತ್ತಾ ನೆಮ್ಮದಿ ಕಂಡುಕೊಂಡಿದ್ದಾರೆ.

ಫಸಲಿನಿಂದ ತುಂಬಿರುವ ಕುಂಬಾಪುರ ಬಾಬು ಅವರ ಜಮೀನಿನಲ್ಲಿರುವ ಅಂಜೂರ ಮರ
ಫಸಲಿನಿಂದ ತುಂಬಿರುವ ಕುಂಬಾಪುರ ಬಾಬು ಅವರ ಜಮೀನಿನಲ್ಲಿರುವ ಅಂಜೂರ ಮರ

ಸಹಜ ಕೃಷಿಗೆ ಒತ್ತು: ‘ಸಹಜ ಕೃಷಿ ಹರಿಕಾರ ಫುಕವೋಕಾ ಅವರಿಂದ ಸ್ಫೂರ್ತಿಗೊಂಡು, ನನ್ನ ಜಮೀನಲ್ಲೂ ಸಹಜ ಕೃಷಿಗೆ ಒತ್ತು ನೀಡಿದ್ದೇನೆ. ಬೆಳೆಗಳಿಗೆ ದನ–ಕುರಿ ಗೊಬ್ಬರ ಹಾಕುತ್ತೇವೆ. ಗೋಕೃಪಾಮೃತ, ಜೀವಾಮೃತವನ್ನು ಹಾಕುವ ಜೊತೆಗೆ, ಮಣ್ಣಿನ ಫಲವತ್ತತೆಗೆ ಎರೆಹುಳು ಸಾಕಿದ್ದೇನೆ. ಜಮೀನಿನಲ್ಲಿ ಕೊಳವೆಬಾವಿ ಇದ್ದು, ಮಳೆ ನೀರು ಸಂಗ್ರಹಕ್ಕೆ 2 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ’ ಎಂದು ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಗ್ರ ಕೃಷಿ ಜೊತೆಗೆ ಹೈನುಗಾರಿಕೆಗೆ ಕೈ ಹಾಕಿ ಹಸು, ಕುರಿ, ಟಗರು, 20 ನಾಟಿ ಕೋಳಿ ಸಾಕಿದ್ದೇನೆ. ಕೃಷಿ ಹೊಂಡದಲ್ಲಿ ಮೀನು ಸಾಕಿದ್ದೇನೆ. ಅರಣ್ಯ ಕೃಷಿ ಭಾಗವಾಗಿ ಜಮೀನಿನ ಬದುಗಳಲ್ಲಿ ತೇಗ, ಸ್ವಿಲ್ವರ್, ಹೆಬ್ಬೇವು, ಕರಿಬೇವು ಸೇರಿ ಸುಮಾರು 300 ಮರಗಳನ್ನು ಬೆಳೆದಿದ್ದೇನೆ. ಸಿಲ್ವರ್‌ ಮರಗಳಿಗೆ ಕಾಳು ಮೆಣಸು ಬಳ್ಳಿ ಹಾಕಿದ್ದೇನೆ. ಬಳ್ಳಿ ಈಗ ಫಸಲು ಕೊಡಲಾರಂಭಿಸಿವೆ’ ಎಂದು ಹೇಳಿದರು.

ಕುಂಬಾಪುರ ಬಾಬು ಅವರ ಜಮೀನಿನಲ್ಲಿ ಬೆಳೆದಿರುವ ಸಿಲ್ವರ್ ಮರಗಳಲ್ಲಿರುವ ಕಾಳು ಮೆಣಸು ಬಳ್ಳಿ
ಕುಂಬಾಪುರ ಬಾಬು ಅವರ ಜಮೀನಿನಲ್ಲಿ ಬೆಳೆದಿರುವ ಸಿಲ್ವರ್ ಮರಗಳಲ್ಲಿರುವ ಕಾಳು ಮೆಣಸು ಬಳ್ಳಿ

‘ನರೇಗಾದಡಿ ಎರೆಹುಳು ಘಟಕ, ಕುರಿ ಶೆಡ್, ಕೋಳಿ ಶೆಡ್ ನಿರ್ಮಿಸಿಕೊಂಡಿದ್ದೇನೆ. ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿ ಕ್ಯಾಪ್ಸಿಕಂ ಬೆಳೆಯಲಾಗುತ್ತಿದೆ. ರೈತರು ಒಂದು ಕೆ.ಜಿ.ಗೆ ₹500 ಕೊಟ್ಟು ಎರೆಹುಳು ಖರೀದಿಸುತ್ತಾರೆ. ಜಮೀನಿನ ಸಮಗ್ರ ಕೃಷಿ ವೀಕ್ಷಿಸಲು ವಿದೇಶಿಯರ ತಂಡವೊಂದು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿತ್ತು. ಈಗಲೂ ಕೆಲವರು ಬಂದು ಹೋಗುತ್ತಾರೆ. ಒಟ್ಟಿನಲ್ಲಿ ಕೃಷಿ ಕೈ ತುಂಬಾ ಆದಾಯದ ಜೊತೆಗೆ ನೆಮ್ಮದಿ ಕೊಟ್ಟಿದೆ. ಬದುಕಿಗೆ ಇನ್ನೇನು ಬೇಕು’ ಎಂದು ಮುಗುಳ್ನಕ್ಕರು.

ಕುಂಬಾಪುರ ಬಾಬು ಅವರ ಜಮೀನಿನ ಪಾಲಿಹೌಸ್‌ನಲ್ಲಿ ಬೆಳೆದಿರುವ ಕ್ಯಾಪ್ಸಿಕಂ
ಕುಂಬಾಪುರ ಬಾಬು ಅವರ ಜಮೀನಿನ ಪಾಲಿಹೌಸ್‌ನಲ್ಲಿ ಬೆಳೆದಿರುವ ಕ್ಯಾಪ್ಸಿಕಂ
‘ಪ್ರೇರಣೆ ನೀಡಿದ ಪ್ರಜಾವಾಣಿ’
‘ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಬರುವ ಕೃಷಿ ಕ್ಷೇತ್ರದ ಹೊಸ ಪ್ರಯೋಗಗಳು ರೈತರ ಯಶೋಗಾಥೆ ಸಮಗ್ರ–ಸಾವಯವ ಕೃಷಿ ಲೇಖನಗಳು ನನ್ನನ್ನು ಆಕರ್ಷಿಸುತ್ತಿದ್ದವು. ನಮ್ಮ ತಂದೆ ಕೃಷಿ ಮಾಡುವಾಗ ರೇಷ್ಮೆ ಮಾವು ಭತ್ತ ಮತ್ತು ರಾಗಿಗೆ ಮಾತ್ರ ಜಮೀನು ಸೀಮಿತವಾಗಿತ್ತು. ಸಮಾಜ–ವಿಜ್ಞಾನ ಶಿಕ್ಷಕನಾಗಿ ಕೆಲ ವರ್ಷ ಕೆಲಸ ಮಾಡಿದ ನನ್ನ ಮನಸ್ಸು ಕೃಷಿಯತ್ತ ಹೊರಳಿತು. ಅದಕ್ಕೆ ಪ್ರೇರಣೆ ನೀಡಿದ್ದು ಪ್ರಜಾವಾಣಿ ಕೃಷಿ ಪುರವಣಿ. ಕೃಷಿಯಲ್ಲಿ ತೊಡಗಿಸಿಕೊಂಡು ಹಂತಹಂತವಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡೆ. ಹೈನುಗಾರಿಕೆ ಮತ್ತು ಅರಣ್ಯ ಕೃಷಿ ಶುರು ಮಾಡಿದೆ. ಹದಿನೈದು ವರ್ಷಗಳ ಪರಿಶ್ರಮವು ಬದುಕಿಗೆ ಅಗತ್ಯ ಆದಾಯ ತಂದು ಕೊಡುತ್ತಿದೆ’ ಎಂದು ಬಾಬು ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಕೃಷಿ ಪಯಣವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT