ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ಬೇಡಿಕೆ ಗೌರವಿಸದ ಸರ್ಕಾರ: ಎಚ್‌ಡಿಕೆ

Published 30 ನವೆಂಬರ್ 2023, 15:36 IST
Last Updated 30 ನವೆಂಬರ್ 2023, 15:36 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಸೇವೆ ಕಾಯಂ ಕುರಿತು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಸರ್ಕಾರ ಗೌರವಿಸುತ್ತಿಲ್ಲ. ಶಾಲಾ– ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಜೊತೆಗೆ, ಹಲವು ಸಮಸ್ಯೆಗಳಿವೆ. ಹೀಗಾದರೆ, ಸರ್ಕಾರಿ ಶಾಲಾ–ಕಾಲೇಜುಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಹೇಗೆ ಸೇರಿಸುತ್ತಾರೆ? ಹಾಗಾಗಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರಿ ಶಾಲಾ– ಕಾಲೇಜು ಹಾಗೂ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಲು ಈ ಸರ್ಕಾರ ಆದ್ಯತೆ ನೀಡುತ್ತಿಲ್ಲ. ಸರ್ಕಾರದ ಧೋರಣೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಳಿಸುತ್ತಿದ್ದಾರೆ. ಶಿಕ್ಷಕರ ಕೊರತೆ ನೀಗಿಸಲು 10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಸ್ತಾವ ಕಳಿಸಿದ್ದೇವೆ ಎಂದು ಶಿಕ್ಷಣ ಇಲಾಖೆ ಆರು ತಿಂಗಳಿಂದ ಹೇಳುತ್ತಲೇ ಇದೆ. ಆದರೆ, ನೇಮಕಾತಿ ಮಾತ್ರ ನಡೆಯುತ್ತಿಲ್ಲ’ ಎಂದು ಟೀಕಿಸಿದರು.

‘ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನುಡಿದಂತೆ ನಡೆದಿದ್ದೇವೆ ಅಂತ ಹೇಳುತ್ತಿದ್ದಾರೆ. ಎಷ್ಟು ದಿನ ಗ್ಯಾರಂಟಿ ಕೊಡಲು ಸಾಧ್ಯ? ನಿರಂತರವಾಗಿ ಕೊಡಲು ನಿಮಗೆ ಸಾಧ್ಯವೆ? ಇದರಿಂದ ಸರ್ಕಾರದ ಮೇಲಾಗುವ ಆರ್ಥಿಕ ಹೊರೆ ಜೊತೆಗೆ, ಅಭಿವೃದ್ಧಿ ಕಾರ್ಯಗಳ ಮೇಲಾಗುವ ದುಷ್ಪರಿಣಾಮವಾಗುವುದಿಲ್ಲವೆ? ಆರು ತಿಂಗಳಿಂದ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ದಿನ ಬೆಳಿಗ್ಗೆ ನೂರಾರು ಕೋಟಿ ವೆಚ್ಚದಲ್ಲಿ ಜಾಹೀರಾತು ಕೊಡುತ್ತಿದ್ದಾರೆ. ಎಷ್ಟು ದಿನ ಇದನ್ನೇ ಹೇಳಿಕೊಂಡು ಹೋಗುತ್ತಾರೆ. ನಿಮ್ಮ ₹2 ಸಾವಿರದಲ್ಲಿ ಜನ ಬದುಕಬಹುದಾದರೆ, ತುಮಕೂರಿನಲ್ಲಿ ಜನ್ಮಕೊಟ್ಟ ತಂದೆಯೇ ಮಕ್ಕಳನ್ನು ಕೊಲೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡರು. ಕುಟುಂಬವೇ ನಾಶವಾಯ್ತು. ನಿಮ್ಮ ₹2 ಎರಡು ಸಾವಿರದಿಂದ ಅಂತಹ ಕುಟುಂಬವನ್ನು ಬದುಕಿಸುತ್ತೀರಾ? ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಕಾರ್ಯಕ್ರಮಗಳನ್ನು ಸರ್ಕಾರ ಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT