ಒಂದು ದಿನವೂ ಜನರ ಸಮಸ್ಯೆ ಕೇಳದ ಕುಮಾರಸ್ವಾಮಿ: ಸಿ.ಪಿ.ಯೋಗೇಶ್ವರ್ ಟೀಕೆ

ಶುಕ್ರವಾರ, ಏಪ್ರಿಲ್ 19, 2019
30 °C
ನಾಗವಾರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಪರ ಪ್ರಚಾರ

ಒಂದು ದಿನವೂ ಜನರ ಸಮಸ್ಯೆ ಕೇಳದ ಕುಮಾರಸ್ವಾಮಿ: ಸಿ.ಪಿ.ಯೋಗೇಶ್ವರ್ ಟೀಕೆ

Published:
Updated:
Prajavani

ಚನ್ನಪಟ್ಟಣ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೆದ್ದು ಹೋದ ನಂತರ ಕ್ಷೇತ್ರದ ಜನರ ಸಮಸ್ಯೆ ಕೇಳಲು ಒಂದು ದಿನವೂ ಚನ್ನಪಟ್ಟಣಕ್ಕೆ ಬಂದಿಲ್ಲ ಎಂದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಟೀಕಿಸಿದರು.

ತಾಲ್ಲೂಕಿನ ನಾಗವಾರ ಗ್ರಾಮದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಪರ ಪ್ರಚಾರ ನಡೆಸಿ ಮಾತನಾಡಿ, ಒಬ್ಬ ಮುಖ್ಯಮಂತ್ರಿಯನ್ನು ಕ್ಷೇತ್ರದ ಜನ ಗೆಲ್ಲಿಸಿ ಕಳುಹಿಸಿದ್ದಾರೆ. ಆದರೆ ಈವರೆಗೆ ಚನ್ನಪಟ್ಟಣಕ್ಕೆ ಜನರ ಸಮಸ್ಯೆ ಕೇಳಲು ಬಂದಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿದಿನ ಹೋಗುತ್ತಾರೆ, ಬರುತ್ತಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರು ಬರುತ್ತಾರೆ, ತಾಲ್ಲೂಕಿನ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಿರೀಕ್ಷೆಗಳಿದ್ದವು. ಆದರೆ ತಾಲ್ಲೂಕಿನಲ್ಲಿ ಒಂದು ದಿನ ಅಥವಾ ಒಂದು ಗಂಟೆ ಅಧಿಕಾರಿಗಳ ಸಭೆ ನಡೆಸಿದ್ದರೆ ತಾಲ್ಲೂಕಿನ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತಿದ್ದವು. ತಾಲ್ಲೂಕಿನ ನೂರಾರು ಕೆರೆಗಳನ್ನು ತುಂಬಿಸಬಹುದಿತ್ತು. ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದಾಗ ಕೆರೆಗಳು ತುಂಬಿದ್ದವು. ಕುಮಾರಸ್ವಾಮಿ ಶಾಸಕರಾದ ನಂತರ ಕೆರೆಕಟ್ಟೆಗಳೆಲ್ಲ ಬರಿದಾಗಿವೆ ಎಂದರು.

ಕುಮಾರಸ್ವಾಮಿ ಜೊತೆಗೆ ಡಿ.ಕೆ.ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾರೆ. ಅವರಿಬ್ಬರು ಮನಸ್ಸು ಮಾಡಿದ್ದರೆ ಇಡೀ ಜಿಲ್ಲೆಯನ್ನು ಏನು ಬೇಕಾದರೂ ಮಾಡಬಹುದಿತ್ತು. ಮುಖ್ಯಮಂತ್ರಿಗೆ ಚನ್ನಪಟ್ಟಣದಲ್ಲಿ ಎಷ್ಟು ಗ್ರಾಮಗಳಿವೆ ಗೊತ್ತಿಲ್ಲ, ಎಷ್ಟು ಬೂತ್ ಇವೆ ಎಂದು ಗೊತ್ತಿಲ್ಲ, ಮುಖಂಡರ ಹೆಸರು ಗೊತ್ತಿಲ್ಲ. ಆದರೂ ಇಲ್ಲಿನ ಮುಖಂಡರು ನಮ್ಮ ಕುಮಾರಣ್ಣ ಎನ್ನುತ್ತಾರೆ. ತಾಲ್ಲೂಕಿನ ನೂರಾರು ಕೆರೆಗಳು ಇಂದು ಬತ್ತಿ ಹೋಗಿವೆ. ಇದಕ್ಕೆ ಕಾರಣ ಯಾರು? ಯಾರನ್ನು ಇದರ ಬಗ್ಗೆ ಪ್ರಶ್ನಿಸಬೇಕು ಎಂದು ಅವರು ಟೀಕಿಸಿದರು.

ತಾಲ್ಲೂಕಿನ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಬಿಜೆಪಿಯನ್ನು ಬೆಂಬಲಿಸಬೇಕು. ಇನ್ನು ಕಾಲ ಮಿಂಚಿಲ್ಲ. ಈ ಬಗ್ಗೆ ಯೋಚಿಸಬೇಕು. ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅದನ್ನು ಮುಂದುವರೆಸಲು ಮೊದಿ ಅವರನ್ನು ಜನತೆ ಬೆಂಬಲಿಸಬೇಕು. ಅಶ್ವಥ್ ನಾರಾಯಣಗೌಡ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಅಶ್ವಥ್ ನಾರಾಯಣಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಮಲವೇಗೌಡ, ಶಿವಲಿಂಗ, ಜಯರಾಮು, ವಿಷಕಂಠು, ಸದಾನಂದ ಇದ್ದರು.

ನಂತರ ತಾಲ್ಲೂಕಿನ ಬೇವೂರು, ಮೊಗೇನಹಳ್ಳಿ, ಹರೂರು, ಮಂಕುಂದ, ಮಂಗಳವಾರಪೇಟೆ, ಕೋಟೆ, ಡೂಮ್ ಲೈಟ್ ಸರ್ಕಲ್, ಚರ್ಚ್ ರಸ್ತೆ, ಅಂಬೇಡ್ಕರ್ ನಗರಗಳಲ್ಲಿ ಪ್ರಚಾರ ನಡೆಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !