ಮಂಗಳವಾರ, ಆಗಸ್ಟ್ 20, 2019
27 °C

ರೈತನ ಮೇಲೆ ಒಂಟಿ ಸಲಗ ದಾಳಿ

Published:
Updated:

ಕನಕಪುರ: ಜಮೀನಿನ ಬಳಿ ದನ, ಕುರಿಗಳನ್ನು ಮೇಯಿಸಲು ಹೋಗಿದ್ದ ವ್ಯಕ್ತಿಗೆ ಕಾಡಾನೆ ಕೊಂಬಿನಿಂದ ತಿವಿದ ಪರಿಣಾಮ ಕರುಳು ಹೊಟ್ಟೆಯಿಂದ ಹೊರ ಬಂದಿರುವ ಘಟನೆ ತಾಲ್ಲೂಕಿನ ಸಾತನೂರು ಹೋಬಳಿ ಕಬ್ಬಾಳು ಸ್ಟೇಟ್‌ ಫಾರೆಸ್ಟ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ರೈತನನ್ನು ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚೇಗೌಡನಡೊಡಿ ಗ್ರಾಮದ ನಾಥೇಗೌಡರ ಮಗ ಲಿಂಗರಾಜು (48) ಎಂದು ಗುರುತಿಸಲಾಗಿದೆ.

ಇವರಿಗೆ ಪತ್ನಿ ಮತ್ತು ಮಕ್ಕಳು ಇದ್ದಾರೆ. ಇವರ ಜಮೀನು ಕಬ್ಬಾಳು ಫಾರೆಸ್ಟ್‌ಗೆ ಹೊಂದಿಕೊಂಡಂತೆ ಇದ್ದು, ಬುಧವಾರ ಬೆಳಿಗ್ಗೆ ದನ ಮತ್ತು ಕುರಿಗಳನ್ನು ಮೇಯಿಸಲು ತೆರಳಿದ್ದಾಗ ಕಾಡಿನಿಂದ ಬಂದ ಒಂಟಿ ಸಲಗ, ಲಿಂಗರಾಜು ಅವರನ್ನು ಅಟ್ಟಿಸಿಕೊಂಡು ಬಂದು ಎರಡೂ ಕೊಂಬಿನಿಂದ ಹೊಟ್ಟೆ ಭಾಗಕ್ಕೆ ತಿವಿದು, ಬಿಸಾಡಿ ಹೋಗಿದೆ.

ದಾಳಿಗೆ ಒಳಗಾದ ಲಿಂಗರಾಜು ಜೋರಾಗಿ ಕೂಗಿಕೊಂಡಿದ್ದಾರೆ. ಗ್ರಾಮದ ಸಮೀಪದಲ್ಲೇ ಜಮೀನು ಇದ್ದುದರಿಂದ ಕೂಡಲೇ ಗ್ರಾಮದ ಜನತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಲಿಂಗರಾಜು ಅವರಿಗೆ ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊರಗಡೆ ಬಂದಿದ್ದ ಕರುಳನ್ನು ವೈದ್ಯರು ಆಪರೇಷನ್‌ ಮಾಡಿ ಒಳಸೇರಿಸಿದ್ದಾರೆ. ಸದ್ಯ ಲಿಂಗರಾಜು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಕುಮಾರ್‌, ಉಪ ವಲಯ ಅರಣ್ಯಾಧಿಕಾರಿಗಳಾದ ರಾಜು, ರಿಜ್ವಾನ್‌, ಕಾಂತರಾಜು ಸೇರಿದಂತೆ ಅರಣ್ಯ ರಕ್ಷಕರು, ಅರಣ್ಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯರಿಂದ ವರದಿ ಪಡೆದಿದ್ದಾರೆ. ಸಾತನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Post Comments (+)