ಗುರುವಾರ , ಡಿಸೆಂಬರ್ 5, 2019
22 °C

ಮನೆಯಲ್ಲಿದ್ದ ಹಣ ಕಳ್ಳತನ ಮಾಡಿದ್ದ ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ತನ್ನ ಮನೆಯಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿದ್ದ ವ್ಯಕ್ತಿ ಹಾಗೂ ಆತನಿಗೆ ಸಹಾಯ ಮಾಡಿದ್ದ ಸ್ನೇಹಿತರನ್ನು ತಾಲ್ಲೂಕಿನ ಅಕ್ಕೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಕಾಲಿಕೆರೆ ಗ್ರಾಮದ ಕುಳ್ಳಯ್ಯ ಎಂಬುವರ ಮಗ ತಿಮ್ಮಯ್ಯ ಕಳ್ಳತನ ಮಾಡಿದ ವ್ಯಕ್ತಿ. ಸ್ನೇಹಿತರಾದ ಅದೇ ಗ್ರಾಮದ ಯಾದಗಿರಿ ಎಂಬುವರ ಮಗ ರಾಜು, ಕೃಷ್ಣ ಎಂಬುವರ ಮಗ ಯೋಗೇಶ್, ತಮ್ಮಣ್ಣ ಎಂಬುವರ ಮಗ ಸಿದ್ದರಾಜು ಈತನಿಗೆ ಸಹಾಯ ಮಾಡಿದ್ದು ಅವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈತ ಕೆಲವು ದಿನಗಳ ಹಿಂದೆ ತನ್ನ ಮನೆಯಲ್ಲಿ ಪತ್ನಿ ಇಲ್ಲದ ಸಂದರ್ಭದಲ್ಲಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ₹7.30 ಲಕ್ಷ ನಗದು ಕಳವು ಮಾಡಿ ಏನೂ ಗೊತ್ತಿಲ್ಲದಂತೆ ಇದ್ದ ಎನ್ನಲಾಗಿದೆ. ಈತನ ಪತ್ನಿ ಜಯಲಕ್ಷ್ಮಮ್ಮ ನಿವೇಶನ ಕೊಳ್ಳಲು ಸಾಲ ಮಾಡಿ ಈ ಹಣ ಇಟ್ಟಿದ್ದರು ಎಂದು ತಿಳಿದು ಬಂದಿದ್ದು, ಹಣ ಕಳ್ಳತನವಾಗಿರುವ ಬಗ್ಗೆ ಅವರು ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜಯಲಕ್ಷ್ಮಿ ಅವರಿಂದ ಹಲವಾರು ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಅವರ ಪತಿ ತಿಮ್ಮಯ್ಯನ ಬಗ್ಗೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದರು. ಆತ ತಾನೇ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಇತರ ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)