ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಗವರ್ನರ್ ಆಗಿಲ್ಲ, ಅದನ್ನೂ ಮಾಡಿ ಬಿಡಬೇಕು: ಶಾಸಕ ಹುಸೇನ್ ವ್ಯಂಗ್ಯ

Published 12 ಜನವರಿ 2024, 11:49 IST
Last Updated 12 ಜನವರಿ 2024, 11:49 IST
ಅಕ್ಷರ ಗಾತ್ರ

ರಾಮನಗರ: ‘ಜೆಡಿಎಸ್ ಅಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಎಲ್ಲವೂ ಆಗಿದ್ದಾರೆ. ಗವರ್ನರ್ ಆಗಿಲ್ಲ. ಅದನ್ನೂ ಮಾಡಿ ಬಿಡಬೇಕು. ಆಗಲಾದರೂ ಎಲ್ಲಿಯಾದರೂ ಅಚ್ಚುಕಟ್ಟಾಗಿ ಇರುತ್ತಾರೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ವ್ಯಂಗ್ಯವಾಡಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಕುರಿತು ನಗರದಲ್ಲಿ ಶುಕ್ರವಾರ ಮಾಧ್ಯಮದವರು ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ಕುಮಾರಸ್ವಾಮಿ ಅವರು ಸ್ಪರ್ಧಿಸಿದರೆ ತುಂಬು ಹೃದಯದ ಸ್ವಾಗತ. ಅವರು ಎಲ್ಲಾ ಚುನಾವಣೆಗಳನ್ನು ಮಾಡಿದ್ದಾರೆ. ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳನ್ನು ಮಾಡಿರುವ ಅವರು, ಎರಡು ಬಾರಿ ಮುಖ್ಯಮಂತ್ರಿಯೂ ಆಗಿದ್ದಾರೆ. ಅವರು ಗವರ್ನರ್ ಒಂದ್ ಆಗಿಲ್ಲ, ಅದನ್ನೂ ಮಾಡಿ ಬಿಡಬೇಕು’ ಎಂದರು.

‘ರಾಜಕಾರಣಕ್ಕಾಗಿ ಕುಮಾರಸ್ವಾಮಿ ಅವರು ಹಿಂದೆ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಈಗ ಬಿಜೆಪಿ ಜೊತೆ ಹೋಗಿದ್ದಾರೆ. ರಾಜಕೀಯಕ್ಕಾಗಿ ಜನರ ಮಧ್ಯೆ ಜಾತಿ ಮತ್ತು ಧರ್ಮಗಳನ್ನು ಒಡೆದು, ವಿಷಬೀಜ ಬಿತ್ತುವುದು ಬಿಜೆಪಿ ಕೆಲಸ. ಇದೀಗ, ಜೆಡಿಎಸ್ ಕೂಡ ಅದಕ್ಕೆ ಕೈ ಜೋಡಿಸಿದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಜಾತಿ ಮತ್ತು ಧರ್ಮದವರ ಪಕ್ಷ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮೈತ್ರಿ ಪಕ್ಷಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

‘ಮೂವರು ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಂತಹ ವಿಷಯದ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT