ಮಹಿಳೆ ಹಂತಕನಿಗೆ ಜೀವಾವಧಿ ಶಿಕ್ಷೆ

ಬುಧವಾರ, ಏಪ್ರಿಲ್ 24, 2019
32 °C

ಮಹಿಳೆ ಹಂತಕನಿಗೆ ಜೀವಾವಧಿ ಶಿಕ್ಷೆ

Published:
Updated:

ರಾಮನಗರ: ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಆಕೆಯನ್ನು ಸುಟ್ಟು ಹಾಕಿದ್ದ ಆರೋಪಿಗೆ ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ಹಾಗೂ ₨1 ಲಕ್ಷ ದಂಡ ವಿಧಿಸಿತು.

ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಮಂಜೇಶ್‌ (33) ಶಿಕ್ಷೆಗೆ ಒಳಗಾದ ಆರೋಪಿ. ಈತ 2014ರಲ್ಲಿ ಸುನಂದಮ್ಮ (28) ಎಂಬುರವನ್ನು ಹತ್ಯೆ ಮಾಡಿದ್ದ.

ಸುನಂದಮ್ಮ ಮಾಗಡಿ ತಾಲ್ಲೂಕಿನ ಸಾತನೂರು ನಿವಾಸಿಯಾಗಿದ್ದು, ಕುಟುಂಬದೊಂದಿಗೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದರು. ಆಕೆಯ ಬಳಿ ಆರೋಪಿಯು ಸಾಲವಾಗಿ ಹಣ ಪಡೆದಿದ್ದರು. ಅದನ್ನು ವಾಪಸ್ ಕೇಳಲು ಆಕೆ ಆರೋಪಿಯ ಮನೆ ಬಳಿ ತೆರಳಿದ್ದರು. ಈ ಸಂದರ್ಭ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಮಂಜೇಶ್‌ ರಿಪೀಸ್‌ ಪಟ್ಟಿಯಿಂದ ಮಹಿಳೆಯ ತಲೆಗೆ ಹಲ್ಲೆ ನಡೆಸಿದ್ದರು. ಇದರಿಂದ ಆಕೆ ಪ್ರಜ್ಞಾಹೀನರಾಗಿ ಬಿದ್ದರು.

ಬಳಿಕ ಮಹಿಳೆಯ ದೇಹವನ್ನು ಬೆಡ್‌ ಶೀಟ್‌ನಲ್ಲಿ ಸುತ್ತಿ, ಗೋಣಿಚೀಲಕ್ಕೆ ತುಂಬಿ ಬಜಾಜ್‌ ಸ್ಕೂಟರಿನಲ್ಲಿ ಕಟ್ಟಿಕೊಂಡು ಬಂದ ಆರೋಪಿಯು ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಸ್‌ಎಲ್‌ಎನ್ ಸಿಟಿ ಬಳಿಯ ರಾಮೇಗೌಡರ ಕೆರೆಯಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಸುಟ್ಟ ವಾಸನೆ ಬರುತ್ತಿದ್ದುದನ್ನು ಗ್ರಹಿಸಿದ ಕುರಿಗಾಹಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರು. ಅಷ್ಟರಲ್ಲಿ ದೇಹ ಪೂರ್ತಿ ಬೆಂದಿದ್ದು, ಮುಖಕ್ಕೆ ಟವಲ್‌ ಸುತ್ತಿದ್ದ ಕಾರಣ ಗುರುತು ಉಳಿದಿತ್ತು. ಕುರಿಗಾಹಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ತಾವರೆಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನಂತರದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಘು ವಾದ ಮಂಡಿಸಿದ್ದರು.

**
ಮೊಬೈಲ್‌ನಿಂದ ಪತ್ತೆ
ಹತ್ಯೆ ಮಾಡಿದ ಬಳಿಕ ಮಹಿಳೆಯ ಬಳಿ ಇದ್ದ ಒಡವೆ ಹಾಗೂ ಮೊಬೈಲ್ ಅನ್ನು ಆರೋಪಿಯು ಒಯ್ದಿದ್ದ. ಒಡವೆಯನ್ನು ಫೈನಾನ್ಸ್ ಒಂದರಲ್ಲಿ ಗಿರಿವಿ ಇಟ್ಟಿದ್ದ. ಮೊಬೈಲ್‌ ಅನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ. ಇದು ಆರೋಪಿಯನ್ನು ಪತ್ತೆ ಮಾಡಲು ಪೊಲೀಸರಿಗೆ ನೆರವಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !