ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಯ ಬದಲಾವಣೆಗೆ ಕ್ರಾಂತಿ ಅಗತ್ಯ: ಎನ್. ಸಂತೋಷ್ ಹೆಗ್ಡೆ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯ
Published 25 ಜುಲೈ 2023, 5:25 IST
Last Updated 25 ಜುಲೈ 2023, 5:25 IST
ಅಕ್ಷರ ಗಾತ್ರ

ರಾಮನಗರ: ‘ಮಾನವೀಯ ಮೌಲ್ಯ ಕಳೆದುಕೊಂಡಿರುವ ವ್ಯವಸ್ಥೆಯ ಬದಲಾವಣೆಗೆ ಕ್ರಾಂತಿಯ ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ನೆಲೆಯಲ್ಲಿ ಶಾಂತಿಯುತವಾಗಿ ಕ್ರಾಂತಿ ಮಾಡಿದಾಗ ಬದಲಾವಣೆ ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ನಗರದ ಶಾಂತಿನಿಕೇತನ ಇಂಟಿಗ್ರೇಟೆಡ್‌ ರೆಸಿಡೆನ್ಸಿಯಲ್ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಟಾಪರ್ಸ್ ಡೇ ಮತ್ತು ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬದಲಾವಣೆಯ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ನನ್ನ ಕಾಲದಲ್ಲಿ ಆಗುತ್ತದೊ ಇಲ್ಲವೊ ಗೊತ್ತಿಲ್ಲ. ಆದರೆ, ಪ್ರಯತ್ನ ಮಾತ್ರ ನಿರಂತರವಾಗಿರಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಹ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ನನಗೆ ಇಷ್ಟೆಲ್ಲವನ್ನು ಕೊಟ್ಟಿರುವ ಸಮಾಜಕ್ಕೆ ನನ್ನ ಕೊಡುಗೆ ಏನು, ಯಾವ ರೀತಿ ಕೊಡುಗೆ ನೀಡಬಹುದು ಎಂದು ಯೋಚಿಸಬೇಕು. ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆ ಅಗತ್ಯ. ನಮ್ಮ ಹಿರಿಯರು ಇವೆರಡನ್ನೂ ಕಾಪಾಡಿಕೊಂಡು ಬಂದಿದ್ದರು. ಆದರೆ, ಈಗ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಡಿಸಿದರು.

ಹೆಚ್ಚಿದ ದುರಾಸೆ:  ‘ನಾನು ಪಡೆದ ಪ್ರಶಸ್ತಿಗಳ‌ ಎಲ್ಲಾ ಹಣವನ್ನು ಆಸ್ಪತ್ರೆ ಸೇರಿದಂತೆ ಸಂಘ- ಸಂಸ್ಥೆ ಹಾಗೂ ಸೇನೆಗೆ ಕೊಟ್ಟಿದ್ದೇನೆ. ಇದರಿಂದ ನಾನು ತೃಪ್ತನಾಗಿದ್ದೇನೆ. ಸಮಾಜದಲ್ಲಿ ಈಗ ದುರಾಸೆ ಹೆಚ್ಚಾಗಿದೆ. ಎಲ್ಲಾ ಕಾಯಿಲೆಗಳಿಗೂ ಮದ್ದು ಇದೆ. ಆದರೆ, ದುರಾಸೆಗಿಲ್ಲ. ಅದು ಯಾವ ಕಾನೂನಿಗೂ ಹೆದರುವುದಿಲ್ಲ. ಮನುಷ್ಯನಿಗೆ ತೃಪ್ತಿ ಇರಬೇಕು. ಅದಿಲ್ಲದಿದ್ದೆ ಮನುಷ್ಯ ಮತ್ತು ಸಮಾಜ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಡಿಡಿಪಿಯು ಗೋವಿಂದರಾಜು ಸಿ.ಕೆ ಮಾತನಾಡಿ, ‘ಪಿಯುಸಿ ಫಲಿತಾಂಶದಲ್ಲಿ ಕಳೆದೆರಡು ವರ್ಷ 23ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆಯ ಫಲಿತಾಂಶ ಇದೀಗ 17ನೇ ಸ್ಥಾನಕ್ಕೆ ಬಂದಿದೆ. ಇದನ್ನು ಒಂದಂಕಿಗೆ ತರುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದರು.

ಸಂಸ್ಥಾಪಕ ಕಾರ್ಯದರ್ಶಿ ಕುಮಾರಸ್ವಾಮಿ ಆರ್, ‘ವಿದ್ಯಾರ್ಥಿಗಳು ಚನ್ನಾಗಿ ಓದಿ ತಮ್ಮ ತಂದೆ–ತಾಯಿ ಜೊತೆಗೆ, ಶಿಕ್ಷಣ ಸಂಸ್ಥೆಗೂ ಹೆಸರು ತರಬೇಕು. ಉನ್ನತ ಸ್ಥಾನಕ್ಕೇರಿ ಸಮಾಜದಲ್ಲಿ ಬದಲಾವಣೆ ತರಬೇಕು’ ಎಂದು ಕಿವಿಮಾತು ಹೇಳಿದರು.

ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಪಿಯು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ‌ ನಿರ್ದೇಶಕಿ ಸೌಮ್ಯ ಕುಮಾರ್, ಖಜಾಂಚಿ ಪುಟ್ಟಸ್ವಾಮಯ್ಯ, ಕಾಲೇಜಿನ ಸಿಇಒ ಸಾಂಭಾಶಿವ ರಾವ್, ಪ್ರಾಂಶುಪಾಲ ದಿಲೀಪ್ ಸಿ.ಎಂ, ಸಂಯೋಜಕರಾದ ನಾರಾಯಣ್ ಟಿ.ವಿ, ಶ್ವೇತಾ ಬಿ.ಎಂ, ಶಾಂತಿನಿಕೇತನ ಪದವಿ ಕಾಲೇಜಿನ ಪ್ರಾಚಾರ್ಯೆ ಮಾನಸ ಎಸ್. ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಕುಸುಮಾ ಬಿ.ಎನ್ ಇದ್ದರು.

‘ಸಮಾಜದಲ್ಲಿ ಕುಸಿದ ನೈತಿಕತೆ ’

‘ಸಮಾಜದಲ್ಲಿ ದಿನದಿಂದ ದಿನಕ್ಕೆ ನೈತಿಕತೆ ಕುಸಿಯುತ್ತಿದೆ. ಇಂದಿನ ಶಿಕ್ಷಣದಲ್ಲಿ ನೀತಿ ಪಾಠಕ್ಕೆ ಜಾಗವೇ ಇಲ್ಲವಾಗಿದೆ. ಬಾಂಬ್ ಹೇಗೆ ಮಾಡಬೇಕು ಎಂದು‌ ಹೇಳಿ ಕೊಡುವ ನಮ್ಮ ಶಿಕ್ಷಣ ಅದನ್ನು ಹೇಗೆ ಬಳಸಬೇಕು ಎಂದು ಕಲಿಸುತ್ತಿಲ್ಲ. ಹಿಂದೆ ಯಾರಾದರೂ ಜೈಲಿ ಹೋಗಿ ಬಂದರೆ ಅಂತಹವರ ಸಹವಾಸದಿಂದ ದೂರವಿರುವಂತೆ ನಮ್ಮ ಹಿರಿಯರು ಹೇಳಿ ಕೊಡುತ್ತಿದ್ದರು. ಇಡೀ ಸಮಾಜ ಅಂತಹವರನ್ನು ದೂರವಿಟ್ಟು ಮತ್ತೆ ಕೆಟ್ಟ ಕೆಲಸಕ್ಕೆ ಕೈ ಹಾಕದಂತೆ ಪಾಠ ಕಲಿಸುತ್ತಿತ್ತು’ ಎಂದು ಸಂತೋಷ್ ಹೆಗ್ಡೆ ಹೇಳಿದರು.‘ಈಗ ಕಾಲ ಬದಲಾಗಿದೆ. ಜೈಲಿಗೆ ಹೋಗಿ ಬಂದವರನ್ನು ಜೈಲಿನ ಹೊರಗಡೆಯೇ ಸ್ವಾಗತಿಸುತ್ತಾರೆ. ವಿಮಾನ ನಿಲ್ದಾಣದಿಂದ ಬಸ್ ನಿಲ್ದಾಣದಿಂದ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಕಾಲದಲ್ಲಿ ನಾವಿದ್ದೇವೆ. ಅಭಿವೃದ್ಧಿ ಮತ್ತು ಆಧುನಿಕತೆಯ ಭರದಲ್ಲಿ ನಮ್ಮ ಸಮಾಜದ ಮೌಲ್ಯಗಳು ಅಧಃಪತನಗೊಂಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT