ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಬೆದರಿಕೆಯಿಂದ ನಾಮಪತ್ರ ಹಿಂದಕ್ಕೆ: BSP ಅಧ್ಯಕ್ಷ ಮುನಿಯಪ್ಪ ಆರೋಪ

Published 13 ಏಪ್ರಿಲ್ 2024, 7:59 IST
Last Updated 13 ಏಪ್ರಿಲ್ 2024, 7:59 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಡಾ. ಚಿನ್ನಪ್ಪ ವೈ. ಚಿಕ್ಕಹಾಗಡೆ ಅವರು ನಾಮಪತ್ರ ಹಿಂಪಡೆಯಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆದರಿಕೆ ಹಾಗೂ ಮೈಸೂರು–ಕೊಡಗು ಕ್ಷೇತ್ರದ ಅಭ್ಯರ್ಥಿ ರೇವತಿ ರಾಜ್ ಅವರ ನಾಮಪತ್ರ ತಿರಸ್ಕೃತವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಿತೂರಿ ಕಾರಣ’ ಎಂದು ಬಿಎಸ್‌ಪಿ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

‘ಡಿ.ಕೆ ಸಹೋದರರ ಬೆದರಿಕೆಯಿಂದಾಗಿ ಚಿನ್ನಪ್ಪ ಅವರು ಯಾರಿಗೂ ಗೊತ್ತಾಗದಂತೆ ನಾಮಪತ್ರ ಹಿಂಪಡೆದಿದ್ದಾರೆ. ನಂತರ, ಯಾರ ಕೈಗೂ ಸಿಗದೆ ತಮ್ಮ ಮೊಬೈಲ್ ಫೋನ್ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ಪಕ್ಷದ ಖಜಾಂಚಿಯೂ ಆಗಿದ್ದ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನನ್ನ ಮೊಬೈಲ್ ಕರೆ ಸ್ವೀಕರಿಸಿ ಮಾತನಾಡಿರುವ ಅವರು, ಅನಿವಾರ್ಯ ಕಾರಣಗಳಿಂದ ನಾಮಪತ್ರ ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಸದ್ಯ ಏನನ್ನೂ ಹೇಳಲಾಗದ ಹಾಗೂ ಯಾರಿಗೂ ಸಿಗುವ ಪರಿಸ್ಥಿತಿಯಲ್ಲಿ ನಾನಿಲ್ಲ ಎಂದು ಭಯಭೀತರಾಗಿ ಮಾತನಾಡಿದ್ದಾರೆ. ಡಿ.ಕೆ ಸಹೋದರರ ಬೆದರಿಕೆ ಕುರಿತು ಪೊಲೀಸ್ ದೂರು ಕೊಡೋಣ ಬನ್ನಿ ಎಂದರೆ, ಸಮಯ ಬಂದಾಗ ಸಿಗುತ್ತೇನೆ ಎನ್ನುತ್ತಿದ್ದಾರೆ. ಹಾಗಾಗಿ, ನಾವೂ ಸುಮ್ಮನಾಗಿದ್ದೆವು’ ಎಂದು ಹೇಳಿದರು.

‘ಸಹೋದರ ಡಿ.ಕೆ. ಸುರೇಶ್ ಗೆಲುವು ಈ ಸಲ ಕಠಿಣವಾಗಿರುವುರಿಂದ, ನಮ್ಮ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಮಾಡಿರುವ ಶಿವಕುಮಾರ್, ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆದು ನಮಗೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ. ಈ ವಿಷಯವನ್ನು ಪಕ್ಷದ ಅಧ್ಯಕ್ಷನಾದ ನಾನು ಹೇಳಬೇಕೇ ಹೊರತು ಅಭ್ಯರ್ಥಿಯಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಶಿವಕುಮಾರ್ ಅವರು ಬಿಎಸ್‌ಪಿಯ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ ಅವರು, ‘ದರ್ಪ, ದೌರ್ಜನ್ಯದಿಂದಲೇ ರಾಜಕಾರಣ ಮಾಡಿಕೊಂಡು ಬಂದಿರುವ ಡಿ.ಕೆ ಸಹೋದರರು ಜಿಲ್ಲೆಯನ್ನು ಲೂಟಿ ಮಾಡಿದ್ದಾರೆ’ ಎಂದು ಶಿವಕುಮಾರ್ ಕುರಿತು ಹಿಂದೆ ಪಕ್ಷದ ವತಿಯಿಂದ ಪ್ರಕಟಿಸಿದ್ದ ‘ಡಿಕೆಶಿ ಕ್ರಿಮಿನಲ್ ಡೈರಿ’ ಪುಸ್ತಕ ಪ್ರದರ್ಶಿಸಿದರು.

ಸಿ.ಎಂ ಪಿತೂರಿ: ‘ತಮ್ಮ ಆಪ್ತ ಸ್ಪರ್ಧಿಸಿರುವ ಕೊಡಗು–ಮೈಸೂರು ಕ್ಷೇತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಲ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅಲ್ಲಿ ಕಾಂಗ್ರೆಸ್ ಗೆಲುವಿಗೆ ತೊಡಕಾಗಬಹುದೆಂಬ ಕಾರಣಕ್ಕಾಗಿ ನಮ್ಮ ಅಭ್ಯರ್ಥಿಯ ಅಫಿಡೇವಿಟ್‌ನಲ್ಲೂ ಎಲ್ಲಾ ದಾಖಲೆಗಳು ಸರಿ ಇದ್ದರೂ, ಅಧಿಕಾರಿಗಳೊಂದಿಗೆ ಪಿತೂರಿ ನಡೆಸಿ ನಾಮಪತ್ರ ತಿರಸ್ಕೃತವಾಗುವಂತೆ ಮಾಡಿದ್ದಾರೆ’ ಎಂದು ದೂರಿದರು.

‘ಬಿಎಸ್‌ಪಿಗೆ ಬರುವ ಮತಗಳು ಕಾಂಗ್ರೆಸ್‌ ಪಾಲಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿ ಸುಲಭವಾಗಲಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು. ಎಲ್ಲಾ ಸರಿ ಇದ್ದರೂ ನಾಮಪತ್ರ ತಿರಸ್ಕರಿಸಿರುವ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಘಟನೆಯನ್ನು ತಕ್ಷಣ ಗಮನಕ್ಕೆ ತಂದು ಪ್ರತಿಭಟಿಸದ ಪಕ್ಷದ ಜಿಲ್ಲಾ ಅಧ್ಯಕ್ಷರನ್ನು ಸಹ ಉಚ್ಛಾಟನೆ ಮಾಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ, ಕಾರ್ಯದರ್ಶಿ ಹಾಗೂ ಬೆಂಗಳೂರು ವಲಯ ಉಸ್ತುವಾರಿ ನಾಗೇಶ್, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಲ್ಲಪ್ಪ, ರಾಮನಗರ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಸಂಯೋಜಕರಾದ ವೆಂಕಟಾಚಲ, ಸ್ವಾಮಿ, ಟಿ.ಸಿ. ಉಮೇಶ್, ಗೌರಿಶಂಕರ್, ಉಪಾಧ್ಯಕ್ಷರಾದ ಮಹದೇವು, ದೇವರಾಜು, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ರಮೇಶ್, ಮಹಿಳಾ ಘಟಕದ ಗೌರಮ್ಮ ಶಿವಲಿಂಗೇಗೌಡ, ಪಾರ್ವತಮ್ಮ ಹಾಗೂ ಬಸವ ಮಾದಮ್ಮ ಇದ್ದರು.

ಬೆಂಬಲ–ತಟಸ್ಥ ಕುರಿತು ಶೀಘ್ರ ನಿರ್ಧಾರ’
‘ಪಕ್ಷದ ಅಭ್ಯರ್ಥಿ ಕಣದಲ್ಲಿಲ್ಲದ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು–ಕೊಡಗು ಕ್ಷೇತ್ರದಲ್ಲಿ ಬೇರೆ ಪಕ್ಷವನ್ನು ಬೆಂಬಲಿಸಬೇಕೇ ಅಥವಾ ತಟಸ್ಥವಾಗಿ ಉಳಿಯಬೇಕೇ ಎಂಬುದರ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ಎರಡೂ ಕಡೆ ಅವರ ಸೂಚನೆ ಮೆರೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಡೆದುಕೊಳ್ಳಲಿದ್ದಾರೆ’ ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT