ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಅಂಗಡಿ ತೆರೆಯಲು ಜಿಲ್ಲಾಧಿಕಾರಿ ಷರತ್ತು

Last Updated 19 ಏಪ್ರಿಲ್ 2021, 3:45 IST
ಅಕ್ಷರ ಗಾತ್ರ

ಕನಕಪುರ: ‘ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರ ಮಾಡಬೇಕೆಂದಿದ್ದರೆ ಮಾಸ್ಕ್‌ ಹಾಕಬೇಕು. ಸ್ಯಾನಿಟೈಜರ್ ಬಳಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್‌ ಖಡಕ್‌ ಸೂಚನೆ ನೀಡಿದರು.

ಇಲ್ಲಿನ ಪೊಲೀಸ್‌ ಠಾಣೆ ಹಿಂಭಾಗದ ತರಕಾರಿ, ಹೂ, ಹಣ್ಣಿನ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಮಾರುಕಟ್ಟೆಯ ಸ್ವಚ್ಛತೆ ಕಾಪಾಡಬೇಕು ಎಂದು ತಾಕೀತು ಮಾಡಿದ ಅವರು, ವ್ಯಾಪಾರಿಗಳಿಗೆ ಕೊರೊನಾ ಜಾಗೃತಿ ಕರಪತ್ರ ನೀಡಿ ಅರಿವು ಮೂಡಿಸಿದರು.

ಬಲವಂತಕ್ಕಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬಾರದು. ಆರೋಗ್ಯದ ಹಿತದೃಷ್ಟಿಯಿಂದ ಕಾಳಜಿವಹಿಸಬೇಕು. ಹಾಗಾಗಿ ಮಾಸ್ಕ್‌ ಧರಿಸಬೇಕು. ಒಬ್ಬರಿಗೆ ಸೋಂಕು ಬಂದರೆ ಅದು ನೂರಾರು ವ್ಯಕ್ತಿಗಳಿಗೆ ಹರಡುತ್ತದೆ. ಮನೆಯಲ್ಲಿ ಮಕ್ಕಳು, ವಯಸ್ಸಾದ ತಂದೆ, ತಾಯಿ ಇರುತ್ತಾರೆ. ಹಾಗಾಗಿ, ಅನಗತ್ಯವಾಗಿ ಹೊರಗಡೆ ಓಡಾಡಬಾರದು ಎಂದರು.

‘ನಾವು ಬಂದಿದ್ದೇವೆ ಎಂದು ಮಾಸ್ಕ್‌ ಹಾಕಿಕೊಂಡು ನಾಳೆಯಿಂದ ಸುಮ್ಮನಾಗಬಾರದು. ನಾವು ಯಾವ ಕ್ಷಣದಲ್ಲಾದರೂ ಬಂದು ಪರಿಶೀಲನೆ ನಡೆಸುತ್ತೇವೆ. ಆಗ ತಪ್ಪು ಮಾಡಿರುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕೆ ಅವಕಾಶ ಕೊಡಬಾರದು’ ಎಂದು ಎಚ್ಚರಿಸಿದರು.

ಹೂ, ಹಣ್ಣು, ತರಕಾರಿ, ಗಿರಾಣಿ ಅಂಗಡಿ, ಫುಟ್‌ಪಾತ್‌ ವ್ಯಾಪಾರಿಗಳು ಸೇರಿದಂತೆ ವ್ಯಾಪಾರದ ಸ್ಥಳಗಳಲ್ಲಿ ಜನರು ಗುಂಪು ಸೇರಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನಗರಸಭೆಯು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಬೇಕು. ಪೊಲೀಸರು ಬೆಳಿಗ್ಗೆ ಮತ್ತು ಸಂಜೆ ಬೀದಿಗಳಲ್ಲಿ ಸುತ್ತಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಗಿರೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಿ.ಎಲ್‌. ಪದ್ಮಾ, ಡಿವೈಎಸ್‌ಪಿ ಕೆ.ಎನ್‌. ರಮೇಶ್‌, ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ತಾ.ಪಂ. ಇಒ
ಎಲ್‌. ಮಧು, ಪೌರಾಯುಕ್ತ ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT