ಹಾರೋಹಳ್ಳಿ: ಕುರಿ, ಮೇಕೆ ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿ ಮರಸರಹಳ್ಳಿ ಸುತ್ತಮುತ್ತಲ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಮೂರು ವರ್ಷದ ಗಂಡು ಚಿರತೆ ಮರಸನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಶನಿವಾರ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ 15 ದಿನಗಳಿಂದ ಜುಟ್ಟೆಗೌಡನ ವಲಸೆ, ಬನವಾಸಿ, ಮರಸನಹಳ್ಳಿ, ಮರಳವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕತ್ತಲಾಗುತ್ತಿದ್ದಂತೆ ಗ್ರಾಮಕ್ಕೆ ನುಗ್ಗುವ ಚಿರತೆ ಸಾಕು ಪ್ರಾಣಿ ಮತ್ತು ಬೀದಿ ನಾಯಿಗಳ ಮೇಲೆ ದಾಳಿ ಮಾಡಿ ಎಳೆದೊಯ್ಯುತ್ತಿತ್ತು. ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಗ್ರಾಮಸ್ತರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದರು. ಮರಸನಹಳ್ಳಿ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಆಯಕಟ್ಟಿನ ಜಾಗದಲ್ಲಿ ಬೋನನ್ನು ಇರಿಸಿದ್ದರು. ಕಳೆದ ರಾತ್ರಿ ಆಹಾರ ಅರಸಿ ಬಂದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಅರಣ್ಯಕ್ಕೆ ಒಯ್ದು ಬಿಟ್ಟಿದ್ದಾರೆ.
ಮರಳವಾಡಿ, ಜುಟ್ಟೆಗೌಡನ ದೊಡ್ಡಿ, ಮರಸನಹಳ್ಳಿ, ಬನವಾಸಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದೆ. ಗತಿತಗ 3-4 ಚಿರತೆಗಳು ಬೀಡು ಬಿಟ್ಟಿರಬಹುದು. ಈಗ ಮರಿ ಚಿರತೆ ಮಾತ್ರ ಸೆರೆಯಾಗಿದೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರೆಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.