ಕೈಕೊಟ್ಟ ವಿದ್ಯುತ್‌: ತಹಶೀಲ್ದಾರ್‌ ಕಚೇರಿಗೆ ಜನರ ಮುತ್ತಿಗೆ

ಭಾನುವಾರ, ಜೂಲೈ 21, 2019
25 °C

ಕೈಕೊಟ್ಟ ವಿದ್ಯುತ್‌: ತಹಶೀಲ್ದಾರ್‌ ಕಚೇರಿಗೆ ಜನರ ಮುತ್ತಿಗೆ

Published:
Updated:
Prajavani

ರಾಮನಗರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ವಿದ್ಯುತ್ ಕೈಕೊಟ್ಟ ಪರಿಣಾಮ ಕಚೇರಿ ಕೆಲಸಕ್ಕೆ ಅಡ್ಡಿಯಾಯಿತು. ಇದರಿಂದ ರೊಚ್ಚಿಗೆದ್ದ ಜನರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಖಾತೆ, ಪಹಣಿ, ಆಧಾರ್‌ ನೋಂದಣಿ ಮೊದಲಾದ ಕಾರ್ಯಗಳಿಗಾಗಿ ನೂರಾರು ಮಂದಿ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ವಿದ್ಯುತ್ ಇಲ್ಲದ ಕಾರಣ ಕಂಪ್ಯೂಟರ್‌ಗಳು ಬಂದ್‌ ಆಗಿದ್ದವು. ಮಧ್ಯಾಹ್ನದವರೆಗೂ ಕಾದು ಸುಸ್ತಾದ ಜನರು ಬೇಸತ್ತು ತಹಶೀಲ್ದಾರ್‌ ಕಚೇರಿ ನುಗ್ಗಿ ವಾಗ್ವಾದ ನಡೆಸಿದರು.

ವಿಷಯ ತಿಳಿದು ಕಚೇರಿಗೆ ಧಾವಿಸಿದ ತಹಶೀಲ್ದಾರ್ ಎಸ್‌.ಕೆ. ರಾಜು, ಜನರನ್ನು ಸಮಾಧಾನಪಡಿಸಿದರು. ಭಾನುವಾರ ಮಳೆಯ ಸಂದರ್ಭ ಶಾರ್ಟ್‌ ಸರ್ಕಿಟ್‌ನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರು ಸರಿಪಡಿಸುತ್ತಿದ್ದಾರೆ ಎಂದು ವಿವರಿಸಿದರು.

ಇದೇ ಸಂದರ್ಭ ತಾಲ್ಲೂಕು ಕಚೇರಿಯಲ್ಲಿ ಶೌಚಾಲಯದ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರಿದರು. ಶಾಸಕರ ಅನುದಾನದಿಂದ ನೆಲ ಮಹಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಸುವುದಾಗಿ ತಹಶೀಲ್ದಾರ್ ಭರಬಸೆ ನೀಡಿದರು.

ಸಿಬ್ಬಂದಿಗೆ ನೋಟಿಸ್‌: ತಾಲ್ಲೂಕಿನ 8 ಕಡೆ ಆಧಾರ್ ನೊಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಆಧಾರ್ ನೊಂದಣಿ ಮಾಡಲು ನಿರಾಕರಿಸುವವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ತಹಶೀಲ್ದಾರ್‌ ಈ ಸಂದರ್ಭ ತಿಳಿಸಿದರು.

ಎಲ್ಲೆಲ್ಲಿ ಕೇಂದ್ರ: ಬಿಡದಿ, ಕೈಲಾಂಚ, ರಾಮನಗರ ತಾಲ್ಲೂಕು ಕಚೇರಿ, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಅಂಚೆ ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸಿಸ್ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಆಧಾರ್ ನೋಂದಣಿ ಮಾಡಬೇಕು. ಸಿಬ್ಬಂದಿ ನಿರಾಕರಿಸಿದಲ್ಲಿ ಜನರು ದೂರು ನೀಡಬಹುದು ಎಂದು ತಹಶೀಲ್ದಾರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !