ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು ತುಂಬಲು ಹೋದ ಪರಿಶಿಷ್ಟ ಬಾಲಕಿ ನಿಂದಿಸಿದ ಪೂಜಾರಿ

ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ * ತಲೆ ಮರೆಸಿಕೊಂಡ ಪೂಜಾರಿ
Published 10 ಅಕ್ಟೋಬರ್ 2023, 21:39 IST
Last Updated 10 ಅಕ್ಟೋಬರ್ 2023, 21:39 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಚನ್ನಮಾನಹಳ್ಳಿಯಲ್ಲಿ ಸೋಮವಾರ ದೇವಸ್ಥಾನದ ನಲ್ಲಿಯಲ್ಲಿ ನೀರು ಹಿಡಿಯಲು ಹೋದ ಪರಿಶಿಷ್ಟ ಜಾತಿಗೆ ಸೇರಿದ 13 ವರ್ಷದ ಬಾಲಕಿಯನ್ನು ದೇವಸ್ಥಾನದ ಪೂಜಾರಿ ಹಾಗೂ ಆತನ ಸಹೋದರಿ ಜಾತಿ ಹೆಸರಲ್ಲಿ ನಿಂದಿಸಿದ್ದಾರೆ.

ಇದನ್ನು ಪ್ರಶ್ನಿಸಿದ ಬಾಲಕಿಯ ಚಿಕ್ಕಪ್ಪ ಹಾಗೂ ಸ್ನೇಹಿತನ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಎಸ್‌ಸಿ ಮತ್ತು ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಸಮೀಪದ ಮಾರಮ್ಮ ದೇವಸ್ಥಾನದ ಆವರಣದಲ್ಲಿರುವ ನಲ್ಲಿಯಲ್ಲಿ ನೀರು ತುಂಬಲು ಬಾಲಕಿ ಬಿಂದಿಗೆಯೊಂದಿಗೆ ತೆರಳಿದ್ದಳು. ಇದನ್ನು ಗಮನಿಸಿದ ದೇವಸ್ಥಾನದ ಪೂಜಾರಿ ಕುಮಾರ್ ಮತ್ತು ಆತನ ಸಹೋದರಿ ಯಶೋಧಾ, ‘ದೇವಸ್ಥಾನ ಮೈಲಿಗೆ ಮಾಡುತ್ತೀರಿ’ ಎಂದು ನಿಂದಿಸಿದರು ಎಂದು ಬಾಲಕಿ ಮನೆಯಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ವಿಚಾರಿಸಲು ಸ್ನೇಹಿತ ಸಿ.ಬಿ. ಜಯಕುಮಾರ್ ಎಂಬುವರ ಜೊತೆ ಬಾಲಕಿಯ ಚಿಕ್ಕಪ್ಪ ಪ್ರಸನ್ನಕುಮಾರ್ ದೇವಸ್ಥಾನಕ್ಕೆ ಹೋದಾಗ ಗಲಾಟೆಯಾಗಿದೆ.

‘ಕುಮಾರ್ ಮತ್ತು ಯಶೋಧಾ ತಮ್ಮ ಕೆನ್ನೆಗೆ ಹೊಡೆದು, ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದರು’ ಎಂದು ಬಾಲಕಿಯ ಚಿಕ್ಕಪ್ಪ ಪ್ರಸನ್ನಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಕೂಗಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದು ಜಗಳ ಬಿಡಿಸಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಹಲ್ಲೆಯಿಂದ ಗಾಯಗೊಂಡ ಪ್ರಸನ್ನಕುಮಾರ್ ಮತ್ತು ಜಯಕುಮಾರ್ ಅವರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಐಜೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಪೊಲೀಸರು ಕುಮಾರ್ ಮತ್ತು ಯಶೋಧಾ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ಐಪಿಸಿ 323, 324, 504, 506 ಹಾಗೂ 34 ಕಲಂ ಅಡಿ ಪ್ರಕರಣ ದಾಖಲಿಸಿದ್ದಾರೆ.

‘ಘಟನೆ ಬಳಿಕ ದೇವಸ್ಥಾನದ ಪೂಜಾರಿ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಯಶೋಧಾ ಅವರನ್ನು ವಿವರಣೆ ಕೇಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT