ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ

ಅಖಿಲ ಭಾರತ ಮಟ್ಟದ ಮುಷ್ಕರ; ಬೀದಿಗಿಳಿದ ಕಾರ್ಮಿಕ ಸಂಘಟನೆಗಳು
Last Updated 26 ನವೆಂಬರ್ 2020, 15:03 IST
ಅಕ್ಷರ ಗಾತ್ರ

ರಾಮನಗರ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಅಖಿಲ ಭಾರತ ಮಟ್ಟದ ಮುಷ್ಕರ ಬೆಂಬಲಿಸಿ ಜಿಲ್ಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಗುರುವಾರ ಸರಣಿ ಪ್ರತಿಭಟನೆ ನಡೆಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ, ಕೆಪಿಟಿಸಿಎಲ್ ಗುತ್ತಿಗೆ ನೌಕರರ ಸಂಘ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿನೌಕರರ ಸಂಘ ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದವು.

ಪ್ರಮುಖ ಬೇಡಿಕೆಗಳು: ಒಟ್ಟು ಏಳು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಯಿತು. ಕೋವಿಡ್ ಲಾಕ್‍ಡೌನ್ ಕಾರಣ ಆರ್ಥಿಕವಾಗಿ ಕಾರ್ಮಿಕರ ಕುಟುಂಬಗಳು ಸೊರಗಿವೆ. ಆದಾಯ ತೆರಿಗೆ ವ್ಯಾಪ್ತಿಯಿಂದಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ ₹7500 ರಂತೆ 6 ತಿಂಗಳ ಕಾಲ ನೀಡಬೇಕು. ಕುಟುಂಬದ ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಬೇಕು. ಎನ್.ಪಿ.ಎಸ್ಯೋಜನೆಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ಪದ್ದತಿಯನ್ನೇ ಮುಂದುವರೆಸಬೇಕು. ನರೇಗಾ ಯೋಜನೆಯಡಿ ಮಾನವ ದಿನಗಳನ್ನು 200 ದಿನಗಳಿಗೆ ಏರಿಸಬೇಕು. ಕನಿಷ್ಠ ಕೂಲಿಯನ್ನು ದಿನವೊಂದಕ್ಕೆ ₹600ಕ್ಕೆಹೆಚ್ಚಿಸಬೇಕು. ನಗರ ಪ್ರದೇಶಗಳಲ್ಲೂ ಉದ್ಯೋಗ ಖಾತ್ರಿ ಜಾರಿಗೊಳಿಸಬೇಕು. ಶಿಕ್ಷಣ, ಆರೋಗ್ಯ, ರೈಲ್ವೆ, ವಿದ್ಯುತ್ ವಿಮೆ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದುಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದವು.

ಅಂಗನವಾಡಿ ಕಾರ್ಯಕರ್ತೆಯರು: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ 2020 ಅನ್ನು ಹಿಂದಕ್ಕೆ ಪಡೆಯುವಂತೆಆಗ್ರಹಿಸಿದರು.

ನೂತನ ಶಿಕ್ಷಣ ನೀತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶಾಸನಾತ್ಮಕವಾದ ಹಕ್ಕು ಕೊಡದ ಕಾರಣ ಅಂಗನವಾಡಿ ಕೇಂದ್ರಗಳು ಮುಚ್ಚಲ್ಪಡುತ್ತವೆ. ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲೇದೊರಕಿಸಿಕೊಡುವ ನೀತಿಯನ್ನು ಅಳವಡಿಸಿಕೊಳ್ಳಬೇಕು. ಐ.ಸಿ.ಡಿ.ಎಸ್‌ಗೆ ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸಬೇಕು. ಅಂಗನವಾಡಿ ನೌಕರರಿಗೆ ತಿಂಗಳಿಗೆ ಕನಿಷ್ಠ ₹21 ಸಾವಿರ ವೇತನ ಕೊಡಬೇಕು. ಸೇವೆಯನ್ನು ಕಾಯಂ ಮಾಡಬೇಕು. ಈಗಾಗಲೇ ನಿವೃತ್ತಿಯಾದವರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಬೇಕು. ಎನ್.ಪಿ.ಎಸ್ ಬದಲಿಗೆ ಹಳೆಯ ಪದ್ಧತಿಯನ್ನೇ ಜಾರಿಗೊಳಿಸಬೇಕು. ಕೋವಿಡ್ ಸೋಂಕಿನಿಂದ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರ ಕುಟುಂಬಗಳಿಗೆ ಕನಿಷ್ಠ 5 ಲಕ್ಷ ಪರಿಹಾರ ಕೊಡಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ನೇತೃತ್ವ ವಹಿಸಿದ್ದರು.

ಗ್ರಾ.ಪಂ. ನೌಕರರ ಸಂಘ: ಸಂಘದ ಪದಾಧಿಕಾರಿಗಳು ಧರಣಿ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು. ಗ್ರಾ.ಪಂ. ನೌಕರರಿಗೆ ಬಾಕಿ ಇರುವ ನಾಲ್ಕು ತಿಂಗಳ ವೇತನವನ್ನು ಕೂಡಲೇಬಿಡುಗಡೆ ಮಾಡಬೇಕು. ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ರದ್ದುಮಾಡಿರುವ ಅನುದಾನವನ್ನು ವಾಪಸ್‌ ನೀಡಬೇಕು. ಕೇಂದ್ರ ಸರ್ಕಾರ ರೂಪಿಸಿರುವ4 ಕಾರ್ಮಿಕ ಸಮಿತಿ ಹಾಗೂ ರೈತ ವಿರೋಧಿ ಕೃಷಿ ಸಂಬಂಧಿಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಸರ್ಕಾರಿ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಂಚಣಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಲಾಯಿತು.

ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ರಾಮನಗರ ಜಿಲ್ಲಾ ವಿದ್ಯುತ್‌ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಅಂಗನವಾಡಿ ನೌಕರರ ಸಂಘದ ಭಾಗ್ಯಮ್ಮ, ಸಾವಿತ್ರಿ, ಬಿಸಿಯೂಟ ನೌಕರರ ಸಂಘದ ರೂಪಾಬಾಯಿ, ಶೋಭಾ, ಕೆಪಿಟಿಸಿಎಲ್ ಗುತ್ತಿಗೆ ನೌಕರರ ಸಂಘದ ತಿಮ್ಮೇಗೌಡ, ಗ್ರಾ.ಪಂ. ನೌಕರರ ಸಂಘದ ಪರಮಶಿವಯ್ಯ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ ಮತ್ತಿತರರು ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು.

ಬಿಡದಿಯಲ್ಲಿ ಬೈಕ್‌ ರ್‍ಯಾಲಿ
ಸಿಐಟಿಯು ಮೊದಲಾದ ಸಂಘಟನೆಗಳ ನೇತೃತ್ವದಲ್ಲಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ನೂರಾರು ಕಾರ್ಮಿಕರು ಮುಷ್ಕವರನ್ನು ಬೆಂಬಲಿಸಿ ಬೈಕ್‌ ರ್‍ಯಾಲಿ ನಡೆಸಿದರು.

ಕೇಂದ್ರ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಬಿಡದಿಯ ಕಾಡುಮನೆ ಪ್ರದೇಶದಿಂದ ಆರಂಭಗೊಂಡ ಬೈಕ್‌ ರ್‍ಯಾಲಿಯು ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸುತ್ತಾ ಕಾರ್ಮಿಕರನ್ನುಒಗ್ಗೂಡಿಸಿಕೊಂಡು ಟೊಯೊಟಾ ಕಾರ್ಖಾನೆಯ ಮುಂಭಾಗ ಸಮಾವೇಶಗೊಂಡಿತು. ಅಲ್ಲಿ ಕಾರ್ಮಿಕರ ಸಮಾವೇಶ ನಡೆಯಿತು. ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕ ವಿರೋಧಿ ಧೋರಣೆಯನ್ನು ಕೈಬಿಟ್ಟುಲಾಕ್‌ಔಟ್ ತೆರವುಗೊಳಿಸಬೇಕು. ಕಾರ್ಮಿಕರ ಅಮಾನತು ಆದೇಶ ಹಿಂಪಡೆಯಬೇಕು. ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಲಾಯಿತು. ಸಿಐಟಿಯು ಹಾಗೂ ಟಿಕೆಎಂ ಕಾರ್ಮಿಕ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಮುಖ ಬೇಡಿಕೆಗಳಿವು
* ಕಾರ್ಮಿಕರಿಗೆ ಕನಿಷ್ಠ ವೇತನ ನೀಡಿ
* ನರೇಗಾ ಕೂಲಿ ಹೆಚ್ಚಿಸಿ
* ಸಾರ್ವಜನಿಕ ಉದ್ದಿಮೆ ಖಾಸಗೀಕರಣ ನಿಲ್ಲಿಸಿ
* ಕಾರ್ಮಿಕ, ರೈತ ವಿರೋಧಿ ಕಾಯ್ದೆ ರದ್ದು ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT