ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಎಚ್‍ಡಿಕೆ ವಿರುದ್ಧ ಸ್ತ್ರೀಯರ ಆಕ್ರೋಶ, ಪ್ರತಿಭಟನೆ

ಸ್ವಾಭಿಮಾನಿ ಮಹಿಳಾ ವೇದಿಕೆಯಿಂದ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ
Published 16 ಏಪ್ರಿಲ್ 2024, 5:41 IST
Last Updated 16 ಏಪ್ರಿಲ್ 2024, 5:41 IST
ಅಕ್ಷರ ಗಾತ್ರ

ರಾಮನಗರ: ‘ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ  ಖಂಡಿಸಿ, ಸ್ವಾಭಿಮಾನಿ ಮಹಿಳಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಉರಿ ಬಿಸಿಲು ಲೆಕ್ಕಿಸದೆ ಜಮಾಯಿಸಿದ ಮಹಿಳೆಯರು, ಬೆಂಗಳೂರು–ಮೈಸೂರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿದರು. ಕುಮಾರಸ್ವಾಮಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹೇಳಿಕೆ ಹಿಂಪಡೆದು ಕೂಡಲೇ ಮಹಿಳೆಯರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯೆ ಪಾರ್ವತಮ್ಮ ಮಾತನಾಡಿ, ‘ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದನ್ನು ಸಹಿಸದ ಕುಮಾರಸ್ವಾಮಿ ಅವರು ರಾಜಕೀಯಕ್ಕಾಗಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರ ಹೀನ ಮನಸ್ಥಿತಿಗೆ ಸಾಕ್ಷಿಯಾಗಿದೆ’ ಎಂದ ಕಿಡಿಕಾರಿದರು.

‘ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಹೊಂದಿರುವ ಗೌರವ ಎಂತಹದ್ದು ಅವರ ಮಾತುಗಳಲ್ಲೇ ಗೊತ್ತಾಗಿದೆ. ಸ್ತ್ರೀಯರು ಸ್ವಾವಲಂಬನೆಯಿಂದ ಬದುಕುತ್ತಾ ಸಬಲೀಕರಣವಾಗುವುದು ಅವರಿಗೆ ಬೇಡವಾಗಿದೆ. ಹಿಂದಿನಂತೆ ನಾಲ್ಕು ಗೋಡೆಗಳ ಮಧ್ಯೆ ಬಿದ್ದಿರಬೇಕೆಂದು ಅವರು ಬಯಸುತ್ತಿದ್ದಾರೆ. ಇಂತಹವರಿಂದಾಗಿಯೇ ಮಹಿಳೆಯರ ಹಕ್ಕುಗಳ ದಮನವಾಗುತ್ತಿರುವುದು’ ಎಂದರು.

ಸದಸ್ಯರಾದ ಗಿರಿಜಮ್ಮ, ನಾಗಮ್ಮ ಮಾತನಾಡಿ, ‘ಕುಮಾರಸ್ವಾಮಿ ಅವರು ಮಹಿಳೆಯರ ಅಭಿವೃದ್ಧಿ ಪರವಿದ್ದಾರೊ ಅಥವಾ ವಿರುದ್ಧವಿದ್ದಾರೊ ಎಂಬುದು ಅವರ ಹೇಳಿಕೆಯ ಮೂಲಕವೇ ಗೊತ್ತಾಗಿದೆ. ಮಹಿಳೆಯರ ಸಬಲೀಕರಣದ ಯೋಜನೆಗಳ ವಿಷಯದಲ್ಲೂ, ಮನಬಂದಂತೆ ಮಾತನಾಡಿ ರಾಜಕೀಯ ಲಾಭ ಪಡೆಯುವ ಅವರಿಗೆ ನಾಚಿಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ನಿಜಕ್ಕೂ ಮಹಿಳೆಯರು, ಯುವಜನರನ್ನು ಒಳಗೊಂಡಂತೆ ಎಲ್ಲರನ್ನೂ ಸಶಕ್ತಗೊಳಿಸುವ ಯೋಜನೆಗಳಾಗಿವೆ. ಇಂತಹ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಸೂಯೆಪಡದೆ ಮೆಚ್ಚುಗೆ ವ್ಯಕ್ತಪಡಿಸಬೇಕು. ರಾಜಕೀಯ ಕಾರಣಕ್ಕೆ ಏನೇನೋ ಮಾತನಾಡಿದರೆ, ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಮಹಿಳಾ ಮುಖಂಡರಾದ ಹಳ್ಳಿಮಾಳ ಲೀಲಾವತಿ, ಭಾಗ್ಯಮ್ಮ, ರೂಪಾ, ವಿವಿಧ ಸಂಘಟನೆಗಳ ಮುಖಂಡರಾದ ಕಿರಣ್ ಕುಮಾರ್, ವೆಂಕಟೇಶ್, ಹರೀಶ್, ಶಿವಶಂಕರ್ ಹಾಗೂ ಇತರರು ಇದ್ದರು.

‘ಸ್ವಾವಲಂಬನೆಗೆ ಗ್ಯಾರಂಟಿ ಪೂರಕ’

‘ಚುನಾವಣಾ ಪೂರ್ವ ಭರವಸೆಯಂತೆ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಕೋವಿಡ್‌ನಿಂದ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಆಸರೆಯಾಗಿವೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿವೆ. ಇದರಿಂದಾಗಿ ಕುಟುಂಬ ನಿರ್ವಹಣೆಯೂ ಅನುಕೂಲವಾಗಿದೆ. ಹೆಣ್ಣು ಮಕ್ಕಳು ಆರ್ಥಿಕವಾಗಿ ಮುಂದೆ ಬಂದರೆ ಇಡೀ ಕುಟುಂಬವೇ ಮುಂದುವರಿದಂತೆ. ಈ ಸಾಮಾನ್ಯ ಜ್ಞಾನವೂ ಇಲ್ಲದ ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ’ ಎಂದು ಸ್ವಾಭಿಮಾನಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT