ಶುಕ್ರವಾರ, ನವೆಂಬರ್ 15, 2019
23 °C
ರಾಮನಗರ ಐಜೂರು ವೃತ್ತದಲ್ಲಿ ಹಸಿರು ಶಾಲು ಬೀಸಿ ರೈತರ ಪ್ರತಿಭಟನೆ

ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ

Published:
Updated:
Prajavani

ರಾಮನಗರ : ನೆರೆ ಸಂತ್ರಸ್ತ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತ್ವದಲ್ಲಿ ರೈತರು ವಾಹನ ಜಾಥಾ ನಡೆಸಿದರು. ತಲಕಾವೇರಿಯಿಂದ ಬೆಂಗಳೂರಿಗೆ ರಾಮನಗರದ ಮೂಲಕ ಸೋಮವಾರ ಜಾಥಾ ತೆರಳಿತು. ಇಲ್ಲಿನ ಐಜೂರು ವೃತ್ತದಲ್ಲಿ ರೈತರು ಹಸಿರು ಶಾಲುಗಳನ್ನು ಬೀಸುವ ಮೂಲಕ ಪ್ರತಿಭಟಿಸಿದರು.

ರಾಜ್ಯದ ವಿವಿಧೆಡೆ ಬರ, ನೆರೆ ಹಾನಿ ಉಂಟಾಗಿದ್ದರೂ ಯಾವುದೇ ಪರಿಹಾರ ದೊರಕಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಕಾಲಿಕ ಮಳೆ, ಬರ ನಿರ್ವಹಣೆ ಕಾಫಿ ಮತ್ತು ಕರಿಮೆಣಸು ಬೆಲೆ ಕುಸಿತದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ರಾಮು ತಿಳಿಸಿದರು.

ಸರ್ಕಾರಗಳು ನೆರೆ ಸಂತ್ರಸ್ತ ಜನರ ನೋವಿಗೆ ಸ್ಪಂದಿಸತ್ತಿಲ್ಲ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಜನರು ಕಳೆದ ಎರಡು ತಿಂಗಳುಗಳಿಂದ ಬೀದಿಗೆ ಬಿದ್ದಿದ್ದಾರೆ. ಮನೆಗಳು, ಶಾಲೆಗಳು ನಾಶವಾಗಿವೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ಮಂಡ್ಯ ಜಿಲ್ಲೆಯ ರೈತ ಜೀವನಾಡಿಯಾಗಿರುವ ಮೈಷುಗರ್ ಮತ್ತು ಪಿಎಸ್ಎಸ್ ಕೆ ಸಕ್ಕರೆ ಕಾರ್ಖಾನೆಗಳಿಗೆ ಚಾಲನೆ ನೀಡದೆ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಡಿಕೆಗಳು: ಕೊಡಗು ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕು. ರೈತ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರಿಗೆ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಪರಿಹಾರವನ್ನು 10 ಪಟ್ಟು ಹೆಚ್ಚಿಸಬೇಕು. ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣದ ಜತೆಗೆ ಜಮೀನು ನೀಡಬೇಕು. ಸಹಕಾರ ಸಂಘಗಳಲ್ಲಿ ಬಡ್ಡಿ ಇಲ್ಲದೇ ಸಾಲ ನೀಡಬೇಕು.

ಸಾಲದ ಮೊತ್ತ ₹ 10 ಲಕ್ಷಕ್ಕೆ ಏರಿಸಬೇಕು. ಅರಣ್ಯ ವನ್ಯಜೀವಿಗಳಿಂದ ಜೀವಹಾನಿ ಬೆಳೆಹಾನಿಗೆ ಶಾಶ್ವತ ಪರಿಹಾರ ನೀಡಬೇಕು. ಜಿಲ್ಲೆಯ ಜಮ್ಮಾ ಬಾಣೆ ವಿವಾದವನ್ನು ರೈತರೊಂದಿಗೆ ಚರ್ಚಿಸಿ ಗೊಂದಲ ನಿವಾರಿಸಬೇಕು. ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು. ಭತ್ತ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ₹ 20 ಸಾವಿರ ಪ್ರೋತ್ಸಾಹಧನ ನೀಡಬೇಕು. 10 ಎಚ್.ಪಿವರೆಗೆ ಯಾವುದೇ ಶುಲ್ಕ ವಿಧಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

 

ಪ್ರತಿಕ್ರಿಯಿಸಿ (+)