ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ‘ರೈತ ಸಿರಿ’

ಧಾನ್ಯ ಬೆಳೆಯಲು, ಸಂಸ್ಕರಿಸಲು ಸರ್ಕಾರದಿಂದ ಸಿಗಲಿದೆ ಪ್ರೋತ್ಸಾಹ ಧನ
Last Updated 3 ಆಗಸ್ಟ್ 2019, 12:16 IST
ಅಕ್ಷರ ಗಾತ್ರ

ರಾಮನಗರ: ಸಿರಿಧಾನ್ಯ ಬಳಕೆ ಕುರಿತು ಈಚೆಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇದಕ್ಕೆ ಪೂರಕವಾಗಿ ಸಿರಿಧಾನ್ಯ ಕೃಷಿ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ‘ರೈತ ಸಿರಿ’ ಎಂಬ ಯೋಜನೆಯನ್ನು ಜಾರಿಗೊಳಿಸಿದೆ.

ಸಿರಿಧಾನ್ಯಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ರೈತಸಿರಿ ಯೋಜನೆಯನ್ನು ಘೋಷಣೆ ಮಾಡಿತ್ತು. ಇದರ ಅಡಿ ಸಿರಿಧಾನ್ಯಗಳಾದ ಊದಲು, ನವಣೆ, ಆರ್ಕ, ಕೊರಲೆ, ಸಾಮೆ ಹಾಗೂ ಬರಗು ಬೆಳೆಯಲು ಪ್ರೋತ್ಸಾಹ ಸಿಗಲಿದೆ.

ಸಿರಿಧಾನ್ಯಗಳನ್ನು ಬೆಳೆಯಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಸಲುವಾಗಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಜತೆಗೆ, ರೈತರು, ಉದ್ದಿಮೆದಾರರು ಮತ್ತು ಗ್ರಾಹಕರಿಗೂ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವೂ ನಡೆಯುತ್ತಿದೆ.

ಇದರಿಂದಾಗಿ ಸಿರಿ ಧಾನ್ಯಗಳ ಬಳಕೆ ಹೆಚ್ಚುತ್ತಿದೆ. ಆದರೆ, ಬಳಕೆಗೆ ತಕ್ಕಂತೆ ಉತ್ಪಾದನೆ ಇಲ್ಲ. ಆದ್ದರಿಂದ ರೈತರನ್ನು ಉತ್ತೇಜಿಸುವ ಸಲುವಾಗಿ `ರೈತಸಿರಿ' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₨10ಸಾವಿರ ಪ್ರೋತ್ಸಾಹ ಧನ ಸಿಗಲಿದೆ. ಈ ಹಣವನ್ನು 2 ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಒಬ್ಬ ರೈತ ಗರಿಷ್ಠ 2 ಹೆಕ್ಟೇರ್‌ವರೆಗೆ ಪ್ರೋತ್ಸಾಹ ಧನ ಪಡೆಯಬಹುದಾಗಿದೆ.

ಸಿರಿಧಾನ್ಯಗಳ ಸಂಸ್ಕರಣೆಗೂ ಪ್ರೋತ್ಸಾಹಧನ ನಿಗದಿ ಮಾಡಲಾಗಿದೆ. ಸಿರಿಧಾನ್ಯಗಳು ಪೋಲಾಗುವುದನ್ನು ತಡೆಯಲು ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಸಹಾಯ ಸಿಗಲಿದೆ. ಸಿರಿಧಾನ್ಯಗಳ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ಪಡೆಯಲು ಸಿರಿಧಾನ್ಯ ಬೆಳೆಯುವ ರೈತರು, ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು, ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳಿಗೆ ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ/ವಿಸ್ತರಣೆಗಾಗಿ ₨10 ಲಕ್ಷ ಸಹಾಯಧನ ನೀಡಲಾಗುತ್ತದೆ.

ಉದ್ದಿಮೆಗೂ ಪ್ರೋತ್ಸಾಹ: ಸಿರಿ ಧಾನ್ಯಗಳನ್ನು ಬಳಕೆ ಮಾಡಿಕೊಂಡು ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುವ ಆಧುನಿಕ ಉದ್ದಿಮೆಗಳಿಗೂ ಪ್ರೋತ್ಸಾಹಧನ ನೀಡಲು ಈ ಯೋಜನೆಯಲ್ಲಿ ಅವಕಾಶವಿದೆ. ಪ್ರತಿ ಘಟಕಕ್ಕೆ ಗರಿಷ್ಠ ₨10 ಲಕ್ಷ ಮಿತಿಯಲ್ಲಿ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ. ಆದರೆ, ಸಿಎಫ್‌ಟಿಆರ್‍ಐ, ಐಐಎಂಆರ್, ಐಸಿಆರ್‍ಐಎಸ್‍ಎಟಿ, ಎನ್‍ಐಎಫ್‌ಟಿಇಎಂ, ಡಿಎಫ್‍ಆರ್‍ಎಲ್ ಸಂಸ್ಥೆಗಳಿಂದ ಪ್ರಮಾಣಿತವಾದ ತಂತ್ರಜ್ಞಾನ ಅಳವಡಿಸಿ ತಯಾರಿಸಿದ ಐಎಸ್‍ಐ/ಬಿಎಸ್‍ಐ ಗುರುತು ಹೊಂದಿರುವ ಹಾಗೂ 2019ರ ಏಪ್ರಿಲ್ 1ರ ನಂತರ ಖರೀದಿಸಿ ಅಳವಡಿಸಿದ ಯಂತ್ರೋಪಕರಣಗಳಿಗೆ ಮಾತ್ರ ಈ ಪ್ರೋತ್ಸಾಹ ಧನ ಲಭ್ಯವಿದೆ.

ಜಿಲ್ಲೆಗೆ 200 ಹೆಕ್ಟೇರ್‌ ಗುರಿ

ರೈತ ಸಿರಿ ಯೋಜನೆಯ ಅಡಿ ಜಿಲ್ಲೆಗೆ 200 ಹೆಕ್ಟೇರ್ ಗುರಿ ನಿಗದಿಯಾಗಿದೆ. ರಾಮನಗರ ತಾಲ್ಲೂಕು–43 ಹೆ, ಚನ್ನಪಟ್ಟಣ–30, ಮಾಗಡಿ–59 ಹಾಗೂ ಕನಕಪುರ 68 ಹೆಕ್ಟೇರ್‌ ಗುರಿ ನಿಗದಿಪಡಿಸಲಾಗಿದೆ.

ಕೃಷಿ ಇಲಾಖೆಯಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಇದೇ 10 ಕಡೆಯ ದಿನವಾಗಿದೆ. ರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಅರ್ಜಿಗಳು ಲಭ್ಯವಿದೆ. ಅರ್ಹ ಫಲಾನುಭವಿಗಳಿಗೆ ಕ್ಷೇತ್ರ ವೀಕ್ಷಣೆ ಬಳಿಕ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್‌. ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT