ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯ: ಮತದಾನ ಬಹಿಷ್ಕಾರದ ಎಚ್ಚರಿಕೆ

ಮಂಜುನಾಥನಗರ–ಹನುಮಂತ ನಗರ ನಿವಾಸಿಗಳಿಂದ ಆಗ್ರಹ
Last Updated 2 ಏಪ್ರಿಲ್ 2019, 12:02 IST
ಅಕ್ಷರ ಗಾತ್ರ

ರಾಮನಗರ: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಇಲ್ಲಿನ ಮಂಜುನಾಥನಗರ ಹಾಗೂ ಹನುಮಂತನಗರದ ನಿವಾಸಿಗಳು ಮಂಗಳವಾರ ರಸ್ತೆ ತಡೆಸಿ ಪ್ರತಿಭಟಿಸಿದರು.

‘ಹತ್ತು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಕಳೆದ ತಿಂಗಳು ಪ್ರತಿಭಟನೆ ನಡೆಸಿದ್ದೆವು. ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಇದೇ 18ರಂದು ನಡೆಯುವ ಮತದಾನವನ್ನು ಬಹಿಷ್ಕರಿಸುತ್ತೇವೆ’ ಎಂದು ಸ್ಥಳೀಯರಾದ ವರಲಕ್ಷ್ಮಿ, ಲಕ್ಷ್ಮಿ, ವನಜಾಕ್ಷಿ, ಶಾಂತಮ್ಮ ಎಚ್ಚರಿಸಿದರು.

‘ಕುಡಿಯುವ ನೀರಿಗಾಗಿ ನಾವು ಪ್ರತಿದಿನ ಕಾಯಬೇಕಾಗಿದೆ. ನೀರಿಗಾಗಿ ಕಾಯುತ್ತಾ ಕುಳಿತರೆ ಕೂಲಿ ಮಾಡಿ ಜೀವನ ನಡೆಸುವುದು ಹೇಗೆ? ಪ್ರತಿಭಟನೆ ಮಾಡಿದರೆ ಅಧಿಕಾರಿಗಳು ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎನ್ನುತ್ತಾರೆ. ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರೆ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಮಗೆ ಬೇಕಾದವರಿಗೆ ಮನೆಯ ಹತ್ತಿರ ಟ್ಯಾಂಕರ್ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಅವರ ಮನೆಯ ತೊಟ್ಟಿ ತುಂಬಿದ ಮೇಲೆ ನಮಗೆ ಕೇವಲ ಎರಡು ಬಿಂದಿಗೆ ನೀರು ಮಾತ್ರ ಸಿಗುತ್ತಿದೆ. ಪ್ರತಿ ತಿಂಗಳು ₨ 220 ನೀರಿನ ಬಿಲ್‌ ಕಟ್ಟಿಸಿಕೊಳ್ಳುತ್ತಾರೆ. ಆದರೆ ಸಮರ್ಪಕವಾಗಿ ನೀರನ್ನು ಬಿಡುವುದಿಲ್ಲ’ ಎಂದು ದೂರಿದರು.

ವಿದ್ಯುತ್‌ ಸಮಸ್ಯೆಯಿಂದ ನೀರನ್ನು ಸರಿಯಾಗಿ ಬಿಡಲು ಆಗುತ್ತಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ಸಮಜಾಯಿಷಿ ನೀಡಿದರು. ‘ವಿದ್ಯುತ್‌ ಸಮಸ್ಯೆ ಇದ್ದರೆ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ, ಕಳೆದ ಬಾರಿ ನಾವು ಪ್ರತಿಭಟನೆ ಮಾಡಿದಾಗಲೂ ನೀವು ಇದೇ ರೀತಿ ಉತ್ತರ ಕೊಟ್ಟಿದ್ದೀರಿ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ನೀರುಗಂಟಿ ಮೊಬೈಲ್‌ ಕರೆ ಸ್ವೀಕರಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೇಸಿಗೆ ಆರಂಭಕ್ಕೂ ಮುನ್ನವೇ ಅಧಿಕಾರಿಗಳು–ಜನಪ್ರತಿನಿಧಿಗಳು ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಇಲ್ಲಿನ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಜನರ ಕೈಗೆ ಸಿಗುತ್ತಿಲ್ಲ. ಇದರಿಂದ ಜನರು ತಾವು ದುಡಿದ ಹಣದಲ್ಲಿ ಕುಡಿಯುವ ನೀರನ್ನು ಕೊಂಡುಕೊಳ್ಳುವ ಪರಿಸ್ಥಿತಿ ಉಂಟಾಗಿದೆ’ ಎಂದು ಮುಖಂಡ ಪ್ರಕಾಶ್ ತಿಳಿಸಿದರು.

‘ಈ ಬಾರಿಯೂ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಬೆಂಗಳೂರು–-ಮೈಸೂರು ರಸ್ತೆ ತಡೆ ಮಾಡುವ ಜತೆಗೆ, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಿದ್ದೇವೆ’ ಎಂದು ತಿಳಿಸಿದರು.

ಸ್ಥಳೀಯರಾದ ರಾಜಣ್ಣ, ರೂಪ, ಗೌರಮ್ಮ, ಉಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT