ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿ

Last Updated 26 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ಗ್ರಾಮೀಣ ಭಾಗದ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇಓದಿಸುವ ದೃಢ ಸಂಕಲ್ಪ ಮಾಡಬೇಕು ಎಂದು ನುಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ನುಣ್ಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಾರೋಕೊಪ್ಪ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಕೊರತೆಯಿಂದಾಗಿ ರಾಜ್ಯದ ನಾನಾ ಕಡೆ ಸರ್ಕಾರಿ ಶಾಲೆಗಳು ಇಂದು ಮುಚ್ಚುವ ಹಂತ ತಲುಪಿವೆ. ಆದರೆ ನಮ್ಮ ಹಳ್ಳಿಗಾಡಿನಲ್ಲಿಯೂ ಖಾಸಗಿ ಶಾಲೆಗಳ ಭರಾಟೆ ಹೆಚ್ಚಾಗುತ್ತಿದ್ದು, ಕೆಲವು ಪೋಷಕರು ಉಳ್ಳವರನ್ನು ಅನುಕರಣೆ ಮಾಡಲೋ, ಒಣ ಪ್ರತಿಷ್ಠೆಗಾಗಿಯೋ ಅಥವಾ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರಕ್ಕೆ ಮರುಳಾಗಿಯೋ ತಮ್ಮ ಮಕ್ಕಳನ್ನು ಸಾಲ ಮಾಡಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಾರೆ. ಆನಂತರ ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸಲು ಇನ್ನಿಲ್ಲದ ಪಡಿಪಾಟಲು ಪಡುವುದನ್ನು ನಾವು ಕಾಣುತ್ತಿದ್ದೇವೆ’ ಎಂದರು.

ನಿವೃತ್ತ ಅಧಿಕಾರಿ ದೊಡ್ಡಕೆಂಪೇಗೌಡ ಮಾತನಾಡಿ, ‘ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ದೊಡ್ಡ ವ್ಯಕ್ತಿಗಳಾಗುತ್ತಾರೆ. ಉಳಿದವರು ಹಿಂದುಳಿಯುತ್ತಾರೆ ಎಂಬ ತಪ್ಪು ಕಲ್ಪನೆ ನಮ್ಮ ಗ್ರಾಮೀಣ ಭಾಗದಲ್ಲಿ ಇಂದು ಹೆಚ್ಚಾಗುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದ್ದು ಸರ್ಕಾರಿ ಶಾಲೆಗಳಲ್ಲಿ ಓದಿ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದುಕೊಂಡವರು ನಮ್ಮ ಕಣ್ಣ ಮುಂದೆಯೆ ಇದ್ದಾರೆ. ಇದನ್ನು ಗ್ರಾಮೀಣ ಭಾಗದ ಪೋಷಕರು ಮನಗಂಡು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು’ ಎಂದರು.

ಉಪನ್ಯಾಸಕ ಎನ್.ಟಿ.ರಾಮಚಂದ್ರ ಮಾತನಾಡಿ, ‘ವಿದ್ಯಾರ್ಥಿಗಳ ಶ್ರದ್ಧೆ, ಸರ್ಕಾರಿ ಶಾಲಾ ಶಿಕ್ಷಕರ ಅರ್ಪಣಾಭಾವ, ಅಧಿಕಾರಿ ವರ್ಗದವರ ಸಹಕಾರ, ಪೋಷಕರ ಪ್ರೋತ್ಸಾಹದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದರು.

ಹಾರೋಕೊಪ್ಪ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಎಂ.ಪಿ.ಸಿ.ಎಸ್. ಕಾರ್ಯದರ್ಶಿ ನಾಗರಾಜು, ಎಸ್.ಡಿ.ಎಂ.ಸಿ. ಅಧ್ಯಕ್ಷ ನಿಂಗಾಚಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ಶಿಕ್ಷಣ ಸಂಯೋಜಕ ಕೆ.ವೆಂಕಟೇಶ್, ಮುಖ್ಯ ಶಿಕ್ಷಕಿ ಪಾರ್ವತಮ್ಮ, ಸಹ ಶಿಕ್ಷಕಿ ಲಕ್ಷೀದೇವಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಎನ್.ಆರ್.ರವಿ, ಮುಖಂಡರಾದ ಎನ್.ಎಲ್.ಶಿವಕುಮಾರ್, ಕೃಷ್ಣೇಗೌಡ, ಹಾರೋಕೊಪ್ಪ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT