ಸೋಮವಾರ, ಸೆಪ್ಟೆಂಬರ್ 23, 2019
24 °C
ಮುಖ್ಯ ರಸ್ತೆಗಳಲ್ಲೂ ಹೊಂಡಗಳ ಹಾವಳಿ: ಜನರ ಪರದಾಟ

ಮಳೆಗೆ ಕೆಸರು ಗುಂಡಿಗಳಾದ ರಸ್ತೆಗಳು

Published:
Updated:
Prajavani

ರಾಮನಗರ: ಕಳೆದೊಂದು ವಾರದಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಇಲ್ಲಿನ ರಸ್ತೆಗಳ ಮಾನ ಹರಾಜು ಹಾಕುತ್ತಿದೆ.

ರಾಮನಗರದ ಸಾಕಷ್ಟು ಕಡೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಮಳೆಗೆ ಅವೆಲ್ಲ ತುಂಬಿ ನಿಂತು ವಾಹನ ಸವಾರರು ಜಾರಿ ಬೀಳುವ ದೃಶ್ಯ ಸಾಮಾನ್ಯವಾಗಿದೆ. ಮುಖ್ಯರಸ್ತೆಗಳಲ್ಲೇ ಹೊಂಡಗಳು ಬಾಯಿ ತೆರೆದು ಕುಳಿತಿವೆ. ಇದರಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ.

ರಾಮನಗರದಿಂದ ಮಾಗಡಿ ಕಡೆಗೆ ಸಾಗುವ ಮುಖ್ಯರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ಈಚೆಗಷ್ಟೇ ಡಾಂಬರೀಕರಣಗೊಳಿಸಿದೆ. ಆದರೆ ಆರು ತಿಂಗಳ ಒಳಗೇ ಮತ್ತೆ ಗುಂಡಿಗಳು ಕಾಣಿಸಿಕೊಂಡಿರುವುದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಇದೆ. ಲೋಕೋಪಯೋಗಿ ಇಲಾಖೆಯು ರಸ್ತೆಗೆ ಡಾಂಬರು ಹಾಕಿ ಕೈ ತೊಳೆದುಕೊಂಡಿದೆ. ಮಳೆ ಬಂದ ಸಂದರ್ಭ ಚರಂಡಿ ನೀರು ರಸ್ತೆಗೇ ಹರಿಯುವ ಕಾರಣ ಡಾಂಬರು ಕಿತ್ತು ಹೋಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು–ಸಾರ್ವಜನಿಕರಿಗೆ ಮಳೆ ಬಂದಾಗಲೆಲ್ಲ ಕೊಳಕು ನೀರಿನ ಸ್ನಾನವಾಗುತ್ತಿದೆ.

ರಾಮನಗರದಿಂದ ಜಾಲಮಂಗಲಕ್ಕೆ ಸಾಗುವ ರಸ್ತೆ ಪರಿಸ್ಥಿತಿ ಇದಕ್ಕಿಂತ ಶೋಚನೀಯವಾಗಿದೆ. ವಿವಿಧ ಕಾಮಗಾರಿಗಳಿಗಾಗಿ ಆಗಾಗ್ಗೆ ರಸ್ತೆಯನ್ನು ಅಗೆಯಲಾಗುತ್ತಿದೆ. ಆದರೆ ಡಾಂಬರೀಕರಣ ಮಾತ್ರ ಮಾಡಿಲ್ಲ. ಹೀಗಾಗಿ ರಸ್ತೆ ತುಂಬೆಲ್ಲ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿಯೂ ವಾಹನ ಸವಾರರು ನಿತ್ಯ ಸರ್ಕಸ್‌ ಮಾಡುತ್ತಿದ್ದಾರೆ.

ಐಜೂರು ವೃತ್ತ ಮಾರ್ಗವಾಗಿ ರೈಲು ನಿಲ್ದಾಣದ ಮೂಲಕ ಯಾರಬ್‌ ನಗರ ಬಳಸಿ ಹುಣಸನಹಳ್ಳಿ ಕಡೆಗೆ ಹೋಗುವ ಮುಖ್ಯರಸ್ತೆಯೂ ಸಂಪೂರ್ಣ ಹಾಳಾಗಿದೆ. ಇಲ್ಲಿಯೂ ಸಾಕಷ್ಟು ಕಡೆ ರಸ್ತೆ ಗುಂಡಿಗಳು ಕಾಣ ಸಿಗುತ್ತವೆ.

ಬಡಾವಣೆಗಳ ಪಾಡು ಕೇಳುವಂತಿಲ್ಲ: ಮುಖ್ಯರಸ್ತೆಯ ಪಾಡು ಹೀಗಾದರೆ ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳ ಒಳ ರಸ್ತೆಗಳ ಪಾಡು ಕೇಳುವಂತೆಯೇ ಇಲ್ಲ. ಇಲ್ಲಿನ ನಿವಾಸಿಗಳಿಗೆ ಮಳೆ ಬಂದ ಕಾಲಕ್ಕೆ ಕೆಸರಿನ ಸ್ನಾನ ಕಾಯಂ ಆಗಿದೆ.

ಕಂದಾಯ ಭವನದ ಹಿಂಭಾಗದಲ್ಲಿ ಇರುವ ಅರ್ಕಾವತಿ ಬಡಾವಣೆ, ರಾಯರದೊಡ್ಡಿ ವೃತ್ತದ ಕೆಳಭಾಗದಲ್ಲಿ ಬರುವ ಬಿಜಿಎಸ್‌ ವೃತ್ತ, ಪವಿತ್ರ ಶಾಲೆ, ಜಿಗೇನಹಳ್ಳಿ ಬಡಾವಣೆ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಇನ್ನೂ ಕಚ್ಚಾ ರಸ್ತೆಗಳೇ ಇವೆ. ಇವುಗಳಲ್ಲಿ ಬಹುತೇಕ ಕಡೆ ನೀರಿನ ಹರಿವಿಗೆ ಚರಂಡಿ ನಿರ್ಮಾಣ ಆಗಿಲ್ಲ. ಹೀಗಾಗಿ ಜೋರಾಗಿ ಮಳೆ ಬಂದ ಸಂದರ್ಭ ಮಣ್ಣು ಕೊಚ್ಚಿ ಹೋಗಿ ಕಂದಕವಾಗುತ್ತಿದೆ. ಮಣ್ಣಿನ ರಸ್ತೆಗಳು ಕೆಸರು ಗದ್ದೆಗಳಾಗಿ ಬದಲಾಗುತ್ತಿವೆ.

ಮುಖ್ಯ ರಸ್ತೆಗಳನ್ನು ಡಾಂಬರೀಕರಣ ಮಾಡುವ ಜೊತೆಗೆ ಕಾಮಗಾರಿ ಗುಣಮಟ್ಟ ಹಾಳಾಗದಂತೆ ನೋಡಿಕೊಳ್ಳಬೇಕು. ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಗರಸಭೆ ಆದ್ಯತೆ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Post Comments (+)