ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ಕಳಪೆ: ಆರೋಪ

Last Updated 11 ಜೂನ್ 2019, 13:29 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಬೈಚಾಪುರದಿಂದ ಕೆಬ್ಬೆಪಾಳ್ಯ ಮಾರ್ಗವಾಗಿ ಆನೆಹಳ್ಳದವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ₹ 92 ಲಕ್ಷ ವೆಚ್ಚದಲ್ಲಿ ನಡೆಸಿದ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

ಕೆಂಪಯ್ಯನಪಾಳ್ಯ, ಬೆಟ್ಟದಾಸಿಪಾಳ್ಯ, ಕಕ್ಕೆಪ್ಪನಪಾಳ್ಯ ಕೆಬ್ಬೆಪಾಳ್ಯ ಗ್ರಾಮಸ್ಥರು ಈ ರಸ್ತೆ ವಿಸ್ತರಿಸಿ ಸೇತುವೆ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ತಗ್ಗಿಕುಪ್ಪೆಯ ಮುಖಂಡ ರಾಮಣ್ಣ ಮಾತನಾಡಿ, ‘ರಸ್ತೆ ಡಾಂಬರೀಕರಣಕ್ಕೆ ಮುನ್ನವೇ ಕೆಬ್ಬೆಪಾಳ್ಯದ ಸಮೀಪ ಕುಸಿದಿದ್ದ ಸೇತುವೆಯನ್ನು ದುರಸ್ತಿಪಡಿಸಿಲ್ಲ. ಪಿಳ್ಳನಕಟ್ಟೆ ಏರಿಯ ಮೇಲೆ ತೀವ್ರ ತಿರುವುಗಳಿವೆ. ತಡೆಗೋಡೆಗೆ ಹಾಲೋಬ್ಲಾಕ್‌ ಇಟ್ಟಿಗೆಗಳನ್ನು ಮೂರು ಅಡಿಗೆ ಒಂದರಂತೆ ನಿಲ್ಲಿಸಿದ್ದಾರೆ. ಕಳಪೆ ಕಾಮಗಾರಿಯಿಂದಾಗಿ ಇಟ್ಟಿಗೆಗಳು ನೆಲಕ್ಕೆ ಉರುಳಿವೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಶಾಲೆಗೆ ಹೋಗುವ ಮಕ್ಕಳು ಕಟ್ಟೆಯ ನೀರಿಗೆ ಅಥವಾ ಏರಿಯಿಂದ ಕೆಳಗಿನ ಕೊರಕಲಿಗೆ ಬೀಳುವ ಅಪಾಯ ಎದುರಾಗಿದೆ’ ಎಂದರು.

ಗ್ರಾಮದ ಮುಖಂಡರಾದ ಜಗದೀಶ್‌ ಕೆ., ನಾಗರಾಜು, ನರಸಿಂಹಮೂರ್ತಿ, ನಾಗರಾಜು ಸಿ, ಚೇತನ್‌ಕುಮಾರ್‌, ರಂಗಪ್ಪ, ರಂಗಸ್ವಾಮಯ್ಯ ಕಳಪೆ ಕಾಮಗಾರಿ ಮಾಡಿ ಪರಾರಿಯಾಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಟ್ಟೆಯ ಏರಿಯ ಮೇಲೆ ರಸ್ತೆ ಅಗಲೀಕರಣಗೊಳಿಸಿ, ತಡೆಗೋಡೆ ನಿರ್ಮಿಸಿ, ಮರುಡಾಂಬರೀಕರಣ ಮಾಡಿಸಬೇಕು ಎಂದು ಆಗ್ರಹಿಸಿದರು.ಬೆಳಗುಂಬದ ಹೊನ್ನಪ್ಪ ಇದ್ದರು.

ಪ್ರತಿಕ್ರಿಯೆ: ಪಿಳ್ಳನಕಟ್ಟೆ ಏರಿಯ ಮೇಲೆ ಗಾರ್ಡ್‌ ಸ್ಟೋನ್‌ ನಿರ್ಮಿಸಲು ನಿಲ್ಲಿಸಿದ್ದ ಹಾಲೋಬ್ಲಾಕ್‌ ಇಟ್ಟಿಗೆಗಳನ್ನು ಗ್ರಾಮಸ್ಥರು ಕಿತ್ತುಕೊಂಡು ಹೋಗಿದ್ದಾರೆ. ₹ 92 ಲಕ್ಷ ಯೋಜನೆಯಲ್ಲಿ ಮೋರಿ, ಚರಂಡಿ ಸೇರಿಸಿರಲಿಲ್ಲ. ಬೇರೆ ಯೋಜನೆ ಮಾಡಿಸಿ, ರಸ್ತೆ ವಿಸ್ತರಣೆ ಮಾಡುತ್ತೇವೆ ಎಂದು ಲೋಕೋಪಯೋಗಿ ಎಇಇ ರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT