ದಬ್ಬಾಳಿಕೆ ತಪ್ಪಿಸಲು ಪಕ್ಷ ಬೆಂಬಲಿಸಿ: ಆರ್‌ಪಿಐ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಭಾನುವಾರ, ಏಪ್ರಿಲ್ 21, 2019
25 °C

ದಬ್ಬಾಳಿಕೆ ತಪ್ಪಿಸಲು ಪಕ್ಷ ಬೆಂಬಲಿಸಿ: ಆರ್‌ಪಿಐ ಚುನಾವಣಾ ಪ್ರಣಾಳಿಕೆ ಬಿಡುಗಡೆ

Published:
Updated:
Prajavani

ರಾಮನಗರ: ‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಲೂಟಿ ಮತ್ತು ಗೂಂಡಾಗಿರಿಯಿಂದ ಮುಕ್ತ ಮಾಡಲು ಮತದಾರರು ಆರ್‌ಪಿಐ(ಎ) ಅನ್ನು ಬೆಂಬಲಿಸಬೇಕು’ ಎಂದು ಪಕ್ಷದ ಅಭ್ಯರ್ಥಿ ಡಾ.ಎಂ. ವೆಂಕಟಸ್ವಾಮಿ ಹೇಳಿದರು.

ಸೋಮವಾರ ಪಕ್ಷದ ವತಿಯಿಂದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ಅರಣ್ಯ ಒತ್ತುವರಿ ಹಾಗೂ ರಿಯಲ್‌ ಎಸ್ಟೇಟ್‌ ಮಾಫಿಯಾ ತಡೆಯುವುದೇ ನಮ್ಮ ಗುರಿಯಾಗಿದೆ’ ಎಂದರು.

‘ಕನಕಪುರದ ಮುಖ್ಯರಸ್ತೆ ಅಭಿವೃದ್ಧಿಯಾಗಿದೆಯೇ ಹೊರತು ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ದಲಿತ ಸಮುದಾಯವನ್ನು ಬೆದರಿಸುವ ತಂತ್ರದ ಮೂಲಕ ಮತಗಳನ್ನು ಪಡೆಯಲು ಮುಂದಾಗಿರುವ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ, ಕೈಗಾರಿಕಾ ಪಾರ್ಕ್‌ ನಿರ್ಮಾಣ, ಜಾನಪದ ಕಲಾ ಕೇಂದ್ರ, ಗುಡಿಸಲು ಮುಕ್ತ ಕ್ಷೇತ್ರ ನಿರ್ಮಾಣಕ್ಕೆ ನಮ್ಮ ಆದ್ಯತೆ. ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳಿಗೆ ನಾಗರಿಕ ಸೌಲಭ್ಯಗಳನ್ನು ಪೂರೈಸುವ 'ಗ್ರಾಮ ಉನ್ನತೀಕರಣ' ಯೋಜನೆಯನ್ನು ಜಾರಿಗೆ ತರಲಾಗುವುದು. ಅರಣ್ಯವಾಸಿಗಳಿಗೆ ಹಕ್ಕುಪತ್ರ, ಮೂಲ ಸೌಕರ್ಯ ವಿಸ್ತರಣೆಗೆ ಆದ್ಯತೆ ನೀಡಲಾಗುವುದು’ ಎಂದರು.

ಬಹುಜನ ದಲಿತ ಸಂಘರ್ಷ ಸಮಿತಿಯ ಆರ್.ಎಂ.ಎನ್. ರಮೇಶ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಎಲ್ಲರೂ ಆರ್‌ಪಿಐ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.

‘ಡಿ.ಕೆ. ಸುರೇಶ್ 2014ರಲ್ಲಿ ಸ್ಪರ್ಧಿಸಿದ್ದಾಗ ₨80 ಕೋಟಿ ಆಸ್ತಿಯನ್ನು ಘೋಷಿಸಿದ್ದರು. ಈಗ ₨339 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಇವರು ಸಂಸದರಾಗುವುದು ಜನಸೇವೆ ಮಾಡಲು ಅಲ್ಲ, ಬದಲಿಗೆ ತಮ್ಮ ಆಸ್ತಿಯನ್ನು ವೃದ್ಧಿಸಿಕೊಳ್ಳಲು ಸಂಸದರಾಗುತ್ತಿದ್ದಾರೆ’ ಎಂದು ಟೀಕಿಸಿದರು.

ಮುಖಂಡರಾದ ವೈ.ಎಸ್. ದೇವೂರ್ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಪಕ್ಷದ ಅಭ್ಯರ್ಥಿಯ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರ ನೀಡಿದರು.

ಮುಖಂಡರಾದ ಬನಶಂಕರಿ ನಾಗು, ಮುನಿರಾಜು, ಜಿ. ಗೋಪಾಲ್, ಪುಟ್ಟಣ್ಣ, ಜೆ. ಚಂದ್ರಪ್ಪ, ಮುತ್ತಣ್ಣ, ಪ್ರಕಾಶ್, ನಾಗರಾಜು, ಚಕ್ಕೆರೆ ಲೋಕೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !