ತತ್ವಪದ ಹಾಡುಗಾರಿಕೆಗೆ ಈಗಲೂ ಬೇಡಿಕೆ

ಶನಿವಾರ, ಮಾರ್ಚ್ 23, 2019
31 °C
ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಶಂಕರಪ್ಪ ಬಾಳಪ್ಪ ಚೌಲದ

ತತ್ವಪದ ಹಾಡುಗಾರಿಕೆಗೆ ಈಗಲೂ ಬೇಡಿಕೆ

Published:
Updated:
Prajavani

ರಾಮನಗರ: ತತ್ಪಪದ ಹಾಡುಗಾರಿಕೆಗೆ ಈಗಲೂ ಬೇಡಿಕೆ ಇದೆ ಎಂದು ಮುಧೋಳ ತಾಲ್ಲೂಕಿನ ರನ್ನಬೆಳಗಲಿಯ ತತ್ವಪದ ಕಲಾವಿದ ಶಂಕರಪ್ಪ ಬಾಳಪ್ಪ ಚೌಲದ ಹೇಳಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತತ್ವಪದಗಳು ಆದ್ಯಾತ್ಮಿಕ ಚಿಂತನೆಗೆ ಕೊಂಡೊಯುತ್ತವೆ. ಕೆಟ್ಟ ಚಟಗಳಿಗೆ, ಆಲೋಚನೆಗಳಿಗೆ ಇವು ಅವಕಾಶ ಕೊಡುವುದಿಲ್ಲ. ಆದ್ದರಿಂದ ಎಲ್ಲರೂ ತತ್ವಪದಗಳ ಗಾಯನವನ್ನು ಇಷ್ಟಪಡುತ್ತಾರೆ ಎಂದು ತಿಳಿಸಿದರು.

ನನಗೀಗ ೮೫ ವರ್ಷ ವಯಸ್ಸು. ಎರಡನೆ ತರಗತಿವರೆಗೆ ಓದಿದ್ದೇನೆ. ನಮ್ಮ ಊರಿನಲ್ಲಿ ಕೆಲವರು ತತ್ವಪದಗಳನ್ನು ಹಾಡುತ್ತಿದ್ದರು. ಅವುಗಳನ್ನು ಕೇಳಿ ನಾನು ಈ ರೀತಿ ಹಾಡಬೇಕು ಎಂದು ಅವರ ಜತೆ ಸೇರಿಕೊಂಡು ಹಾಡುವುದನ್ನು ಕಲಿತುಕೊಂಡೆ. ಆಗ ನನಗೆ ೮ ವರ್ಷ ವಯಸ್ಸು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ತತ್ವಪದಗಳನ್ನು ಹಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಶಿಶುನಾಳ ಷರೀಫ, ಕಡಕೋಳ ಮಡಿವಾಳಪ್ಪ, ನಾಗಲಿಂಗ ಯೋಗಿ, ನಿಜಗುಣ ಶಿವಯೋಗಿ, ಪುರಂದರದಾಸರು ಸೇರಿದಂತೆ ಹಲವು ಬರೆದಿರುವ ತತ್ವಪದಗಳನ್ನು ಹಾಡುತ್ತೇನೆ. ಮೊದಲು ತತ್ವಪದಗಳನ್ನು ಹಾಡಿದರೆ ಜನರು ಬಹಳ ಗೌರವ ಕೊಡುತ್ತಿದ್ದರು, ಜತೆಗೆ ದವಸಧಾನ್ಯಗಳನ್ನು ಕೊಡುತ್ತಿದ್ದರು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಈಗ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಒಂದು ಕಾರ್ಯಕ್ರಮಕ್ಕೆ ₹20ರಿಂದ 25 ಸಾವಿರ ನೀಡುತ್ತಾರೆ ಎಂದು ತಿಳಿಸಿದರು.

ತತ್ವಪದಗಳು ಸರಳವಾದ ರೀತಿಯಲ್ಲಿ ಜೀವನದ ಸಂದೇಶವನ್ನು ಹೇಳುತ್ತವೆ. ಆದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ತತ್ವಪದಗಳ ಗಾಯನ ಬೇಡಿಕೆ ಇದೆ. ಗಾಯಕರಾಗುವವರಲ್ಲಿ ಸಂಗೀತದ ಜ್ಞಾನ ಇರಬೇಕು, ಜತೆಗೆ ಆಸಕ್ತಿ, ಶಾಂತಿ, ಸಮಾಧಾನಿಯಾಗಿರಬೇಕು. ಸರ್ಕಾರ ಜನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಜನಪದ ಕಲೆಗಳನ್ನು ಕಲಿತರೆ ವಿದ್ಯಾರ್ಥಿ ವೇತನವನ್ನು ನಿಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.

ಕರಡಿ ಮಜಲು ಕಲಾವಿದ ಮಡಿವಾಳಪ್ಪ ಮ. ಕರಡಿ ಮಾತನಾಡಿ ಕಲಾವಿದರಿಗೆ ₹1,500 ಮಾಸಾಶನ ನೀಡಲಾಗುತ್ತಿದೆ. ಇದನ್ನು ₹5 ಸಾವಿರಕ್ಕೆ ಸರ್ಕಾರ ಹೆಚ್ಚಿಸಬೇಕು. ಕಲಾವಿದರು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಕಲೆಗಳಿಗಾಗಿಯೇ ಜೀವನವನ್ನು ಮೀಸಲಾಗಿಟ್ಟಿರುತ್ತಾರೆ. ಮಾಸಾಶನವನ್ನು ಹೆಚ್ಚಳ ಮಾಡಿದರೆ ಇಳಿವಯಸ್ಸಿನ ಕಲಾವಿದರು ಉತ್ತಮವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಲಾವಿದರಿಗೆ ನೀಡುವ ಪ್ರದರ್ಶನದ ಹಣವನ್ನು ಆರ್‌ಟಿಜಿಎಸ್ ಮಾಡುತ್ತೇವೆ ಎಂದು ಹೇಳುವ ಇಲಾಖೆಯವರು ವರ್ಷಗಳು ಕಳೆದರೂ ಕಲಾವಿದರ ಖಾತೆಗೆ ಹಣವನ್ನು ಹಾಕುವುದಿಲ್ಲ. ಇದರಿಂದ ಕಲೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕಲಾವಿದರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾರ್ಯಕ್ರಮದ ಮುಗಿದ ಹದಿನೈದು ದಿನದ ಒಳಗೆ ಕಲಾವಿದರ ಖಾತೆಗೆ ಹಣ ಹಾಕಿದರೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್ ಮಾತನಾಡಿ ತಿಂಗಳ ಅತಿಥಿ ಕಾರ್ಯಕ್ರಮದ 50ನೇ ಸಂಚಿಕೆ ಇದಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಕಲಾವಿದರು ಭಾಗವಹಿಸಿ ಪ್ರದರ್ಶನ ನೀಡುವ ಜತೆಗೆ ತಮ್ಮ ಜೀವನ ಅನುಭವಗಳನ್ನು ಪ್ರಕಟಪಡಿಸಿದ್ದಾರೆ. ಈ ಕಾರ್ಯಕ್ರಮದಿಂದ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಪ್ರತಿ ತಿಂಗಳ ಕಾರ್ಯಕ್ರಮಕ್ಕೂ ಪ್ರೇಕ್ಷಕರು ಹೆಚ್ಚಾಗುತ್ತಿದ್ದಾರೆ ಎಂದು ತಿಳಿಸಿದರು.

ಕಲಾವಿದರಾದ ಮುತ್ತಪ್ಪ ಹಲ್ಲಪ್ಪ ಸೋದಿ, ಯಲ್ಲಪ್ಪ ಸಿದ್ದಪ್ಪ ಬನಾಜಿಗೋಡ, ರಾಮಪ್ಪ ಸಿದ್ದಪ್ಪ ಕೋತ, ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿ ಆದಿತ್ಯನಂಜರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !