ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರ ಪ್ರಾಣ ಹೋದಾಗ ಚೌಕಿದಾರ ಎಲ್ಲಿದ್ದರು: ಕೆ. ಉಮಾ ಪ್ರಶ್ನೆ

ಸಾರ್ವಜನಿಕ ಸಭೆ
Last Updated 13 ಏಪ್ರಿಲ್ 2019, 14:37 IST
ಅಕ್ಷರ ಗಾತ್ರ

ರಾಮನಗರ: ‘ಪ್ರಧಾನಿ ನರೇಂದ್ರ ಮೋದಿ ನಾನು ಚೌಕಿದಾರ ಎನ್ನುತ್ತಿದ್ದಾರೆ. ಪುಲ್ವಾಮ ದಾಳಿಯಲ್ಲಿ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಾಗ ಈ ಚೌಕಿದಾರ ಎಲ್ಲಿದ್ದರು’ ಎಂದು ಎಸ್‌ಯುಸಿಐ(ಸಿ)ನ ರಾಜ್ಯ ಘಟಕದ ಕಾರ್ಯದರ್ಶಿ ಕೆ. ಉಮಾ ಪ್ರಶ್ನಿಸಿದರು.

ಇಲ್ಲಿನ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ವತಿಯಿಂದ ಶನಿವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ‘ಸೈನಿಕರ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಇವರಿಗೆ ದೇಶಭಕ್ತಿ ಎಂದರೇನು ಎಂದು ತಿಳಿದಿದೆಯೇ? ದೇಶದಲ್ಲಿನ ಎಲ್ಲರಿಗೂ ದೇಶದ ಬಗ್ಗೆ ಕಾಳಜಿ ಇರುತ್ತದೆ. ಆದರೆ ಇವರು ದೇಶಪ್ರೇಮವನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಐದು ವರ್ಷಗಳ ಹಿಂದೆ ಮೋದಿ ಘರ್ಜಿಸುವ ಮೂಲಕ ಅಧಿಕಾರಕ್ಕೆ ಬಂದರು. ಪ್ರಧಾನ ಸೇವಕನಾಗಿ ದುಡಿಯುತ್ತೇನೆ ಎಂದು ಹೇಳಿದ್ದವರು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡಿದರು. ಸಾವಿರಾರು ಕೋಟಿಗಳ ಹಗರಣ ಮಾಡಿದರು. ಈಗ ಚುನಾವಣೆಯ ಸಂದರ್ಭದಲ್ಲಿ ಸೈನಿಕರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜನ ಈಗಲಾದರೂ ಎಚ್ಚೆತ್ತುಕೊಂಡು ಇಂತಹವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.

‘ದೇಶದಲ್ಲಿ ಜಾತಿ, ಧರ್ಮಗಳನ್ನು ವಿಭಜನೆ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬಡತನ, ರೈತರ ಆತ್ಮಹತ್ಯೆ, ಕಾರ್ಮಿಕರ ಹಕ್ಕುಗಳ ಹರಣ, ಹಸಿವಿನಿಂದ ಸಾವು ಸಂಭವಿಸುತ್ತಿದ್ದರೂ ಇವರು ಯಾವುದೇ ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಲಿಲ್ಲ’ ಎಂದರು.

‘ಜನರ ಬಡತನವನ್ನು ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿವೆ. ಕರ್ನಾಟಕದಲ್ಲಿಯೂ ಸಹ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಧಿಕಾರಕ್ಕಾಗಿ ರೆಸಾರ್ಟ್‌ ರಾಜಕಾರಣ ಮಾಡುವ ಮೂಲಕ ಶಾಸಕರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಯುಸಿಐ(ಸಿ)ನ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಎನ್. ಶ್ರೀರಾಮ್ ಮಾತನಾಡಿ ‘ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಜನರಿಗೆ ನಿಜವಾದ ಸ್ವಾತಂತ್ರ್ಯ ಲಭಿಸಿಲ್ಲ. ಸಮಸ್ಯೆಗಳು ಬಗೆಹರಿದಿಲ್ಲ. ಐದು ವರ್ಷಗಳ ಹಿಂದೆ ಸ್ಪರ್ಧಿಸಿದ್ದ ವ್ಯಕ್ತಿಗಳ ಆಸ್ತಿಗಳು ಈ ಬಾರಿ ಐದು ಪಟ್ಟು ಹೆಚ್ಚಾಗಿವೆ. ಮತದಾರರು ಈ ಬಾರಿಯಾದರೂ ಪಕ್ಷಗಳನ್ನು ಹಾಗೂ ಅಭ್ಯರ್ಥಿಗಳನ್ನು ವಿಶ್ಲೇಷಿಸುವ ಮೂಲಕ ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕು’ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಸಿ. ರಮಾ, ಜಿಲ್ಲಾ ಸಮಿತಿ ಸದಸ್ಯೆ ಎಸ್. ಶೋಭಾ ಮಾತನಾಡಿದರು.

*ಜನರು ಕಟ್ಟುವ ತೆರಿಗೆಯನ್ನು ಬಂಡವಾಳಶಾಹಿಗಳ ಬೆಳವಣಿಗೆಗಾಗಿ ಬಳಸಲಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆ ನಾಶವಾಗಿ ಬಂಡವಾಳಶಾಹಿ ವ್ಯವಸ್ಥೆ ಬಲಗೊಳ್ಳುತ್ತಿದೆ
–ಕೆ. ಉಮಾ
ರಾಜ್ಯ ಕಾರ್ಯದರ್ಶಿ, ಸಿಐಟಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT