ಭಾನುವಾರ, ನವೆಂಬರ್ 17, 2019
21 °C
ಸುಣ್ಣಘಟ್ಟ ಗ್ರಾಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಜಿಗುಪ್ಸೆಗೆ ಆತ್ಮಹತ್ಯೆಯೇ ಪರಿಹಾರವಲ್ಲ

Published:
Updated:
Prajavani

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡವರಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂದು ಮಾನಸಿಕ ತಜ್ಞೆ ಡಾ.ಪದ್ಮರೇಖ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಸಮುದಾಯ ರಮಣ ಮಹರ್ಷಿ ಅಂಧರ ಪರಿಷತ್ತು, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಹಾಗೂ ಸ್ವಾಭಿಮಾನಿ ಅಂಗವಿಕಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಾರ ಜೊತೆಯೂ ಬೆರೆಯದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವರು ಸಾಮಾನ್ಯವಾಗಿ ಆತ್ಮಹತ್ಯೆಯತ್ತ ಮುಖ ಮಾಡುತ್ತಾರೆ. ಇದು ಅಕ್ಷಮ್ಯ ಅಪರಾಧ. ಇಂತಹ ಲಕ್ಷಣ ಹೊಂದಿರುವವರಿಗೆ ಕುಟುಂಬದವರು ಧೈರ್ಯ ತುಂಬುವುದರ ಜೊತೆಗೆ ಮಾನಸಿಕ ತಜ್ಞರ ಬಳಿ ಅವರನ್ನು ಪರೀಕ್ಷೆಗೆ ಒಳಪಡಿಸಿ ಮುಂದಾಗುವ ಅನಾಹುತನ್ನು ತಪ್ಪಿಸಬೇಕು ಎಂದರು.

‘ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ. ಸಮಸ್ಯೆಯನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಖಿನ್ನತೆಗೆ ಒಳಗಾಗಬಾರದು. ಇಂಥವರನ್ನು ಏಕಾಂಗಿಯಾಗಿ ಬಿಡುವುದರಿಂದ ಅವರ ಮನಸ್ಸು ಚಂಚಲವಾಗುವುದಕ್ಕೆ ನಾವೇ ಅವಕಾಶ ಮಾಡಿದಂತಾಗುತ್ತದೆ. ಅವರ ಸಮಸ್ಯೆಯನ್ನು ಪರಿಹಾರ ಮಾಡಲು ಕುಟುಂಬದವರು ಪ್ರಯತ್ನಿಸಬೇಕು’ ಎಂದರು.

ಮಾನಸಿಕ ತಜ್ಞೆ ಡಾ.ಅನಿಮೇಷ ಮಾತನಾಡಿ, ಸಾಮಾನ್ಯವಾಗಿ ಮನುಷ್ಯರು ಎಲ್ಲ ವಿಚಾರಗಳಿಗೂ ಗಾಬರಿಗೊಳ್ಳುತ್ತಾರೆ. ಇದು ಮುಂದೊಂದು ದಿನ ಖಾಯಿಲೆಯಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಅನಾಹುತಗಳು ಎದುರಾಗುವುದು ಖಚಿತ. ಹಾಗಾಗಿ ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯ ಜಿಲ್ಲಾ ಸಂಯೋಜಕ ಸಿದ್ದೇಗೌಡ ಮಾತನಾಡಿದರು. ಕ್ಷಯರೋಗ ವಿಭಾಗದ ಲೋಕೇಶ್, ಸ್ವಾಭಿಮಾನಿ ವಿಕಲಚೇತರ ಸಂಘದ ಅಧ್ಯಕ್ಷ ಶಿವಬೀರಯ್ಯ, ಸ್ವಯಂ ಸೇವಕರಾದ ಹೊಯ್ಸಳ, ನಾಗಮಣಿ, ವನಜಾಕ್ಷಿ, ಪುಟ್ಟಮಾದಯ್ಯ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)