ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮೈತ್ರಿ: ಗೊಂದಲಕ್ಕೆ ತೆರೆ ಎಳೆದ ಜೆಡಿಎಸ್‌ ವರಿಷ್ಠರು

ಮುಖಂಡರ ಅಸಮಾಧಾನ ಶಮನ: ಸಿ.ಎಂ. ಇಬ್ರಾಹಿಂ, ಶಾಸಕರಾದ ಕಂದಕೂರ, ಮಂಜುನಾಥ್ ಗೈರು
Published 1 ಅಕ್ಟೋಬರ್ 2023, 17:12 IST
Last Updated 1 ಅಕ್ಟೋಬರ್ 2023, 17:12 IST
ಅಕ್ಷರ ಗಾತ್ರ

ರಾಮನಗರ: ಬಿಜೆಪಿ ಜತೆ ಮೈತ್ರಿಗೆ ನಿರ್ಧರಿಸಿದ ನಂತರ ಮೊದಲ ಬಾರಿಗೆ ಪಕ್ಷದ ಶಾಸಕರು, ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಭಾನುವಾರ ದಿನವಿಡೀ ಸಭೆ ನಡೆಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಪಕ್ಷದೊಳಗೆ ಹೊಗೆಯಾಡುತ್ತಿದ್ದ ಅಸಮಾಧಾನ ಹಾಗೂ ಗೊಂದಲಕ್ಕೆ ತೆರೆ ಎಳೆದರು.    

ಬಿಡದಿ ಬಳಿಯ ಕೇತಿಗಾನಹಳ್ಳಿಯ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯತೆ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಯಿತು. ಅದರ ಜೊತೆಗೆ ‘ತಾಯಿ ಸಮಾನವಾದ ಪಕ್ಷಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಬಗೆಯುವುದಿಲ್ಲ’ ಎಂದು ಸಾಮೂಹಿಕವಾಗಿ ಪ್ರಮಾಣ ಮಾಡಲಾಯಿತು.

ಮೈತ್ರಿ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಈ ಸಭೆಯಿಂದಲೂ ದೂರ ಉಳಿದರು. ಅವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಜೆಡಿಎಸ್‌ನ 19 ಶಾಸಕರ ಪೈಕಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸಹ ಸಭೆಯತ್ತ ಸುಳಿಯಲಿಲ್ಲ. ಹನೂರು ಶಾಸಕ ಎಂ.ಆರ್. ಮಂಜುನಾಥ್ ವೈಯಕ್ತಿಕ ಕಾರಣಗಳಿಂದ ಬಂದಿರಲಿಲ್ಲ. 

‘ಮೈತ್ರಿ ವಿಚಾರದಲ್ಲಿ ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ. ಇಡುವ ಅಗತ್ಯವೂ ಇಲ್ಲ. ಪಕ್ಷದ ತತ್ವ, ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಸ್ಪಷ್ಟನೆ ನೀಡುವ ಮೂಲಕ ಸಿ.ಎಂ. ಇಬ್ರಾಹಿಂ ಅವರ ಮುನಿಸು ಮತ್ತು ಪಕ್ಷದೊಳಗಿನ ಗೊಂದಲಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.

‘ಬಿಜೆಪಿ ಜತೆ ಮೈತ್ರಿ ಕುರಿತಂತೆ ದೇವೇಗೌಡ ಮತ್ತು ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆ ಎದುರಿಸುತ್ತೇವೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಒಕ್ಕೊರಲ ನಿರ್ಧಾರ ಪ್ರಕಟಿಸಿದರು.

‘ಬಿಜೆಪಿ ಜತೆ ಮೈತ್ರಿಗೆ ಇಂದಿನ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಮುಂದಿನ ಒಂದು ತಿಂಗಳಲ್ಲಿ 31 ಜಿಲ್ಲೆಗಳಲ್ಲೂ ಸಭೆ ನಡೆಸಿ ಎಲ್ಲಾ ಸಮಸ್ಯೆ, ಗೊಂದಲಗಳನ್ನೂ ಬಗೆಹರಿಸಲಾಗುವುದು. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್‌ ಯಾವುದೇ ತೊಂದರೆ ಆಗುವುದಿಲ್ಲ. ಆ ಬಗ್ಗೆ ನಾನು ಭರವಸೆ ಕೊಡುತ್ತೇನೆ’ ಎಂದು ಕುಮಾರಸ್ವಾಮಿ ಅಭಯ ‌ನೀಡಿದರು.

ರಾಜ್ಯದ ಹಿತ ಅಡಗಿದೆ: ‘ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಈ ಮೈತ್ರಿಯಲ್ಲಿ ರಾಜ್ಯದ ಹಿತ ಅಡಗಿದೆ. ರಾಜ್ಯ ಎದುರಿಸುತ್ತಿರುವ ಅನೇಕ  ಜ್ವಲಂತ ಸಮಸ್ಯೆಗಳಿಗೆ ಈ ಮೈತ್ರಿ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಅದಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದೇನೆ. ಈ ಮೈತ್ರಿ ನನ್ನ ಸ್ವಾರ್ಥಕ್ಕಲ್ಲ, ನಾಡಿನ ಹಿತಕ್ಕಾಗಿ. ಮೈತ್ರಿಯಿಂದ ಅಧಿಕಾರಕ್ಕೆ ಬರುವುದು ನನ್ನ ಉದ್ದೇಶವಲ್ಲ’ ಎಂದು ಕುಮಾರಸ್ವಾಮಿ  ಸ್ಪಷ್ಟಪಡಿಸಿದರು.

‘ಮತಕ್ಕಾಗಿ ಯಾವುದೇ ಒಂದು ಸಮುದಾಯವನ್ನು ಓಲೈಕೆ ಮಾಡಲಾರೆ. ಮುಸ್ಲಿಮರಿಗೆ ನಾನು ಅನ್ಯಾಯ ಮಾಡಿಲ್ಲ. ಯಾವ ಸಮುದಾಯವನ್ನು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ನನ್ನ ಬದ್ಧತೆ ಬಗ್ಗೆ ಆ ಸಮುದಾಯದವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ರೀತಿ ನಾನು ಪೊಳ್ಳು ಭರವಸೆ ನೀಡಲಾರೆ’ ಎಂದರು.

‘ರಾಜಕೀಯವಾಗಿ ನನ್ನ ಜತೆ ಇದ್ದ ಅನೇಕರು ಐಶ್ವರ್ಯ ಹುಡುಕಿಕೊಂಡು ಎಲ್ಲೆಲ್ಲೋ ಹೋದರು. ನಾನು ಇಲ್ಲಿಯೇ ಇದ್ದೇನೆ. ಇಳಿ ವಯಸ್ಸಿನಲ್ಲಿಯೂ ಪಕ್ಷವನ್ನು ಕಟ್ಟುತ್ತಿದ್ದೇನೆ. ನಿಮ್ಮನ್ನು ನಂಬಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದೇನೆ. ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗುತ್ತಿದೆ’ ಎಂದು ಎಚ್‌.ಡಿ. ದೇವೇಗೌಡ ಸಮರ್ಥಿಸಿಕೊಂಡರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ ಪಕ್ಷದ ಮುಖಂಡರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಂಜೆಯವರೆಗೂ ನಡೆದ ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಇರಲಿಲ್ಲ. 

‘ತಾಯಿ ಸಮಾನವಾದ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ’ ಎಂದು ಸಭೆಯಲ್ಲಿದ್ದ ಮುಖಂಡರು ಪ್ರಮಾಣ ಮಾಡಿದರು
‘ತಾಯಿ ಸಮಾನವಾದ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ’ ಎಂದು ಸಭೆಯಲ್ಲಿದ್ದ ಮುಖಂಡರು ಪ್ರಮಾಣ ಮಾಡಿದರು
ಇಬ್ರಾಹಿಂ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಭದ್ರಾವತಿಯಿಂದ ಅವರನ್ನು ಕರೆದುಕೊಂಡು ಬಂದು ಯುವ ಜನತಾದಳ ಅಧ್ಯಕ್ಷರನ್ನಾಗಿ ಮಾಡಿದೆ. ಈ ಸಭೆಗೆ ಅವರನ್ನು ಕರೆತರಲು ಬಹಳ ಪ್ರಯತ್ನಪಟ್ಟರೂ ಆಗಲಿಲ್ಲ.
-ಎಚ್‌.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ಬಿಜೆಪಿ ಜೊತೆಗಿನ ಮೈತ್ರಿ ವಿಚಾರವು ಕೆಲವರಿಗೆ ಕಹಿ ಉಳಿದವರಿಗೆ ಸಿಹಿಯಾಗಿದೆ. ಆದರೆ ಕಹಿ ಪರಿಸ್ಥಿತಿಯನ್ನು ಸಿಹಿ ಮಾಡಿಕೊಳ್ಳಬೇಕಿದೆ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕಿದೆ –ಭೋಜೇಗೌಡ ವಿಧಾನ ಪರಿಷತ್ ಸದಸ್ಯ

ಹಿಂದೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಜತೆ ನೇರಾನೇರ ರಾಜಕಾರಣ ಮಾಡಿದ್ದೆವು. ಆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮೈತ್ರಿಯಿಂದ ಸಮಸ್ಯೆಯಾಗಲ್ಲ. ದೇವೇಗೌಡರು ನಮ್ಮ ಗಾಡ್‌ಫಾದರ್. ಅವರ ನಿರ್ಧಾರಕ್ಕೆ ಬದ್ಧ.
-ಡಿ.ಸಿ. ಗೌರಿಶಂಕರ್ ಮಾಜಿ ಶಾಸಕ ತುಮಕೂರು ಗ್ರಾಮಾಂತರ
ಮೈತ್ರಿ ಕುರಿತು ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಹಿಂದೆ ಕಾಂಗ್ರೆಸ್ ಜೊತೆ ಆಕಸ್ಮಿಕವಾಗಿ ಮೈತ್ರಿ ಆಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿದೆ.
-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಕಾಂಗ್ರೆಸ್ ನಿಜವಾದ ಮುಸ್ಲಿಂ ವಿರೋಧಿ. ಅಲ್ಪಸಂಖ್ಯಾತರು ಇಂದು ಒಳ್ಳೆಯ ಸರ್ಕಾರಿ ಹುದ್ದೆಗಳಲ್ಲಿ ಇದ್ದರೆ ಅದಕ್ಕೆ ದೇವೇಗೌಡರೇ ಕಾರಣ ಎಂಬುದನ್ನು ನಮ್ಮವರು ಅರಿಯಬೇಕು.
-ರಫೀಕ್ ಜೆಡಿಎಸ್ ಉಪಾಧ್ಯಕ್ಷ
ಪಕ್ಷದ ಹಿತಕ್ಕಾಗಿ ವರಿಷ್ಠರು ಮೈತ್ರಿ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡಬೇಕು. ಪಕ್ಷ ಉಳಿದರೆ ನಾವು ಉಳಿಯುತ್ತವೆ. ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ
-ಜಿ.ಟಿ. ದೇವೇಗೌಡ ಶಾಸಕ
ಎಲ್ಲರೂ ನೀರಾವರಿ ಯೋಜನೆಗಳ ಬಗ್ಗೆ ದನಿ ಎತ್ತಬೇಕು. ಬಿಜೆಪಿ ಜೊತೆಗೂಡಿ ಎದುರಾಳಿಗಳಿಗೆ ತಕ್ಕ ಉತ್ತರ ಕೊಡಬೇಕು.
- ವೈ.ಎಸ್‌.ವಿ. ದತ್ತ ಜೆಡಿಎಸ್ ಮುಖಂಡ

ಹಿಂದುತ್ವಕ್ಕೆ ಶಿಫ್ಟ್ ಆಗಲ್ಲ: ಫಾರೂಕ್

‘ಯಾವುದೇ ಕಾರಣಕ್ಕೂ ನಾವು ಹಿಂದುತ್ವದ ಅಜೆಂಡಾಕ್ಕೆ ಶಿಫ್ಟ್ ಆಗುವುದಿಲ್ಲ. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಭರವಸೆ ನೀಡಿದರು. ‘ಹಿಂದೆಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಇಪ್ಪತ್ತು ತಿಂಗಳು ಸರ್ಕಾರ ರಚಿಸಿದಾಗ ಅಲ್ಪಸಂಖ್ಯಾತರಿಗೆ ಏನಾದರೂ ತೊಂದರೆಯಾಗಿತ್ತಾ’ ಎಂದು ಪ್ರಶ್ನಿಸಿದರು. ‘ಜೆಡಿಎಸ್‌ನಿಂದ ಅಲ್ಪಸಂಖ್ಯಾತರು ದೂರವಾಗುತ್ತಿಲ್ಲ. ನಮ್ಮ ಹಿತರಕ್ಷಣೆಗೆ ಪಕ್ಷ ಬದ್ಧವಾಗಿದೆ.ನಮಗೆ ಪಕ್ಷ ಸಾಕಷ್ಟು ನೀಡಿದೆ’ ಎಂದರು. ‘ಬಿಜೆಪಿ ಜೊತೆ ಯಾವ ಪಕ್ಷ ತಾನೇ ಮೈತ್ರಿ ಮಾಡಿಕೊಂಡಿಲ್ಲ? ಬಿಎಸ್‌ಪಿ ಶಿವಸೇನೆ ಎನ್‌ಸಿಪಿ ಜೆಡಿಯು ಕೂಡಾ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿಲ್ಲವೇ? ಆಗೆಲ್ಲಾ ನಮ್ಮ ಸಮುದಾಯದ ಹಿತಾಸಕ್ತಿಯನ್ನು ಯಾರಾದರೂ ಬಲಿ ಕೊಟ್ಟರೇ?’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT