ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ಶಿಕ್ಷಕರು, ಪೋಷಕರು ಪ್ರೋತ್ಸಾಹ ನೀಡಿ’

ಶೆಟ್ಟಿಹಳ್ಳಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರತಿಭಾ ಕಾರಂಜಿ
Last Updated 24 ಆಗಸ್ಟ್ 2019, 13:32 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿದಾಗ ಮಾತ್ರ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಸಾಧ್ಯವಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮತ್ತಿಕೆರೆ ಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಮಳೂರು ವಲಯದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರವು ಮಕ್ಕಳಲ್ಲಿರುವ ಪ್ರತಿಭಾ ವಿಕಸನಕ್ಕೆ ಇಲಾಖೆಯ ಮೂಲಕ ‘ಪ್ರತಿಭಾ ಕಾರಂಜಿ’ ನಡೆಸುತ್ತಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರೋಗ್ಯ ಮುಖ್ಯ. ಆರೋಗ್ಯವಂತರಾಗಿ ಇರಬೇಕೆಂದರೆ ಮಕ್ಕಳು ವಿದ್ಯೆಯ ಜತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು.ಪ್ರತಿ ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮತ್ತೀಕೆರೆ ಜಯರಾಮ್ ಮಾತನಾಡಿ, ‘ಮಕ್ಕಳಲ್ಲಿ ಕಲೆ ಎಂಬುದು ಗೌಪ್ಯವಾಗಿ ಅಡಗಿರುತ್ತದೆ. ಅದನ್ನು ಹೊರ ಹಾಕುವಂತಹ ಅವಕಾಶವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಕಲ್ಪಿಸಿಕೊಡುತ್ತಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ’ ಎಂದು ಕರೆ ನೀಡಿದರು.

ಮಳೂರು ಹೋಬಳಿಯ ವಿವಿಧ ಕ್ಲಸ್ಟರ್ ಗಳಿಂದ ಬಂದಿದ್ದ 14 ಪ್ರೌಢಶಾಲೆಗಳ ವಿದ್ಯಾರ್ಥಿಗಳು ನೃತ್ಯ, ಭರತನಾಟ್ಯ, ಚಿತ್ರಕಲೆ, ಸಂಗೀತ, ರಂಗೋಲಿ, ನಾಟಕ, ಭಾಷಣ, ಧಾರ್ಮಿಕ ಪಠಣ, ಭಾವಗೀತೆ, ಜನಪದ ಗೀತೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಡೇನಿಯಲ್ ಸುಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕ ಚೆನ್ನೇಗೌಡ, ಮುಖ್ಯ ಶಿಕ್ಷಕರಾದ ವಿನೋಧ, ನಿರ್ಮಲಾ, ರಂಗಧಾಮಯ್ಯ, ಬಸವರಾಜಪ್ಪ, ಶ್ರೀಧರ ಸ್ವಾಮಿ, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸದಸ್ಯ ಕೃಷ್ಣಪ್ರಸಾದ್ ಭಾಗವಹಿಸಿದ್ದರು.

ಜನಪದ ಕಲಾವಿದ ದೊಡ್ಡಮಳೂರು ಪುಟ್ಟಸ್ವಾಮಿಗೌಡ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಶಿಕ್ಷಕಿ ರಶ್ಮಿ ನಿರೂಪಿಸಿದರು. ನವೀನ ವಂದಿಸಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT