ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಮಲಿನವಾಗುತ್ತಿದೆ ಐತಿಹಾಸಿಕ ಹೊಂಬಾಳಮ್ಮನ ಸಿಹಿ ನೀರಿನ ಕೆರೆ

Published 28 ಅಕ್ಟೋಬರ್ 2023, 7:04 IST
Last Updated 28 ಅಕ್ಟೋಬರ್ 2023, 7:04 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಕೋಟೆಯ ಕಂದಕಕ್ಕೆ ನೀರು ತುಂಬಿಸುತ್ತಿದ್ದ ಹಾಗೂ ಕುಡಿಯಲು ಬಳಸುತ್ತಿದ್ದ ಸಿಹಿನೀರಿನ ತಟಾಕ ಹೊಂಬಾಳಮ್ಮನ ಕೆರೆಗೆ ಕಲುಷಿತ ನೀರು ತುಂಬಿ ರೋಗ ಹರಡುವ ತಾಣವಾಗಿದೆ. 

ಪಟ್ಟಣದ ಬೆಳೆದಂತೆಲ್ಲಾ ಕೆರೆ ಏರಿಮೇಲೆ ಹಾದುಹೋಗುವ ಬೆಂಗಳೂರು -ಕುಣಿಗಲ್ ರಸ್ತೆ ವಿಸ್ತರಣೆ ಮಾಡಿದರು. ಕಲ್ಯಾಬಾಗಿಲು, ಹೊಸಮಸೀದಿ ಮೊಹಲ್ಲಾ, ಗಾಣಿಗರ ಬೀದಿಗಳ ಮನೆಗಳಿಂದ ಹರಿದು ಬರುವ ಕಲುಷಿತ ಹೊಂಬಾಳಮ್ಮನಕೆರೆ ಒಡಲು ಸೇರುತ್ತಿದೆ. ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ.

ಕಲ್ಯಾಬಾಗಿಲು ಬಡಾವಣೆ, ಜ್ಯೋತಿನಗರದಿಂದ ಚರಂಡಿ ಮೂಲಕ ಹರಿದು ಬರುವ ಒಳಚರಂಡಿ ಕಲುಷಿತ ಕೆರೆ ನೀರಿಗೆ ಸೇರಿ ಮಲಿನವಾಗುತ್ತಿದೆ. ಕಂದಕಕ್ಕೆ ಪಟ್ಟಣದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪ್ರಾಣಿ–ಪಕ್ಷಿಗಳಿಗೆ ಮತ್ತು ರೈತರಿಗೆ ತವನಿಧಿಯಂತಿದ್ದ ಹೊಂಬಾಳಮ್ಮನ ಕೆರೆ ಕಲುಷಿತ ನೀರಿನಿಂದ ಕೂಡಿ ದುರ್ಗಂಧ ಬೀರುತ್ತಿದೆ. ವಿಷಜಂತುಗಳು ತುಂಬಿವೆ.‌

ಬೋಗುಣಿಯಂತಿರುವ ಮಾಗಡಿ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಇರುವ ಸೋಮೇಶ್ವರಸ್ವಾಮಿ ದೇವಾಲಯದ ಬೆಟ್ಟದಿಂದ ಹರಿದು ಬರುವ ಮಳೆಯ ನೀರು ಹೊಂಬಾಳಮ್ಮನಕೆರೆಯಲ್ಲಿ ಸಂಗ್ರಹವಾಗುತ್ತಿತ್ತು. ಇದೊಂದು ಸಿಹಿನೀರಿನ ಒರತೆಯ ತಟಾಕವಾಗಿದೆ. ಕೆರೆ 112 ಎಕರೆ ವಿಸ್ತೀರ್ಣವಿತ್ತು. 100 ಎಕರೆ ಅಚ್ಚಕಟ್ಟು ಪ್ರದೇಶವಿದೆ. ವರ್ಷಪೂರ್ತಿ ಕೆರೆಯಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ತೆಂಗು, ಅಡಿಕೆ, ಹೂವು, ಹಣ್ಣು, ತರಕಾರಿ, ಸೊಪ್ಪು ಬೆಳೆದು ಬದುಕು ಕಟ್ಟಿಕೊಂಡಿದ್ದರು. ಸಿಹಿನೀರಿನಿಂದ ತುಂಬಿರುತ್ತಿದ್ದ ಕೆರೆಯಲ್ಲಿ ಮೀನು, ಏಡಿಕಾಯಿ, ಪಕ್ಷಿಗಳು ಆವಾಸ ಸ್ಥಾನ ಮಾಡಿಕೊಂಡಿದ್ದವು.

ಜೀವಜಲವನ್ನು ಮೈದುಂಬಿಕೊಂಡು ರೈತರ ಭೂಮಿಯನ್ನು ಹಸಿರನ್ನಾಗಿಸಿದ್ದ ಕೆರೆಯಲ್ಲಿ ಜಂಡುಹುಲ್ಲು ಬೆಳೆದಿದೆ. ಕೆರೆ ಏರಿಯಲ್ಲಿ ಕಳೆಯ ಬಳ್ಳಿ ಬೆಳೆದಿದೆ. ಹಗಲಿನಲ್ಲಿಯೇ ಏರಿಯ ಮೇಲೆ ಹಾವುಗಳು ಓಡಾಡುತ್ತಿವೆ. ಕೆರೆ ದುರಸ್ತಿ ಪಡಿಸುವುದಾಗಿ ಮಾಗಡಿ ಯೋಜನಾ ಪ್ರಾಧಿಕಾರ ಮತ್ತು ಸಣ್ಣ ನೀರಾವರಿ ಇಲಾಖೆಗಳು ಹಣ ಖರ್ಚು ಮಾಡಿವೆ. ಆದರೆ, ಕೆರೆಯ ಅವಸಾನ ಮಾತ್ರ ನಿಂತಿಲ್ಲ.

ಮಾಗಡಿ ಹೊಂಬಾಳಮ್ಮನಕೆರೆ ಅಕ್ರಮ ಒತ್ತುವರಿಯಾಗಿದ್ದು ರೋಗಹರಡುವ ತಾಣವಾಗಿದೆ.
ಮಾಗಡಿ ಹೊಂಬಾಳಮ್ಮನಕೆರೆ ಅಕ್ರಮ ಒತ್ತುವರಿಯಾಗಿದ್ದು ರೋಗಹರಡುವ ತಾಣವಾಗಿದೆ.
ಮಲಿನವಾಗಿರುವ ಹೊಂಬಾಳಮ್ಮನ ಕೆರೆಯನ್ನು ಸ್ವಚ್ಛಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ
–ರಮ್ಯಾ ಹೊಂಬಾಳಮ್ಮನಪೇಟೆ
ಕೆರೆಯನ್ನು ಸ್ವಚ್ಛಗೊಳಿಸಿ ವಾಯುವಿಹಾರ ಪಥ ನಿರ್ಮಿಸುವ ಯೋಜನೆ ಇದೆ.
ಶಿವರುದ್ರಯ್ಯ ಮುಖ್ಯಾಧಿಕಾರಿ ಪುರಸಭೆ
ಕೆರೆಯ ಐತಿಹಾಸಿಕ ಮಹತ್ವ
ಮಾಗಡಿ ಸೀಮೆಯನ್ನು ಆಳುತ್ತಿದ್ದ ಗುಡೇಮಾರನಹಳ್ಳಿ ಪಾಳೇಗಾರ ತಳಾರಿ ಗಂಗಪ್ಪ ನಾಯಕ ಮಾಗಡಿಯಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ್ದ. ಈ ಕೋಟೆಯ ಕಂದಕಕ್ಕೆ ನೀರು ತುಂಬಲು ಮತ್ತು ಕೋಟೆಯ ಒಳಗಿನ ಪಾಳೇಗಾರನ ಅರಮನೆ ದೇವಾಲಯಗಳಿಗೆ ಕುಡಿಯುವ ನೀರು ಬಳಸಲು ಕ್ರಿ.ಶ. 15ನೇ ಶತಮಾನದಲ್ಲಿ ಕೆರೆಯನ್ನು ಕಟ್ಟಿಸಿದ ಎಂಬುದು ಕೆರೆಯ ಐತಿಹಾಸಿಕ ದಾಖಲೆಯಲ್ಲಿದೆ. ಬೆಟ್ಟದ ಆಚೆ ಇದ್ದ ಚೆಲುವರಾಯ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡಿ ಇಡೀ ಊರಿನ ವಾಸಿಗಳೆಲ್ಲರೂ ಸಾಂಕ್ರಾಮಿಕ ರೋಗಕ್ಕೆ ಬಲಿಯಾದರು. ಚೆಲುವರಾಯ ಪಟ್ಟಣವನ್ನು ತ್ಯಜಿಸಿ ಮೊಮ್ಮಕ್ಕಳೊಂದಿಗೆ ಸಾಧ್ವಿ ಶಿರೋಮಣಿ ಹೊಂಬಾಳಮ್ಮ ಕೆರೆಯ ದಂಡೆಯಲ್ಲಿ ಬಂದು ನೆಲೆ ನಿಂತಳು. ಪಾಳೇಗಾರರು ಆಕೆಯ ಹೆಸರನ್ನೇ ಊರು ಮತ್ತು ಕೆರೆಗೆ ಇಟ್ಟರು. ಅಂದಿನಿಂದ ಹೊಂಬಾಳಮ್ಮನಕೆರೆ ಎಂದು ಹೆಸರಾಯಿತು.
ಕೆರೆ ಸ್ವಚ್ಛಗೊಳಿಸಿ ಜಲಮೂಲ ಉಳಿಸಿ
ಹೊಂಬಾಳಮ್ಮನಕೆರೆಯಲ್ಲಿ ಸಿಹಿನೀರು ತುಂಬಿರುತ್ತಿತ್ತು. ನಮ್ಮ ಮನೆಗಳಲ್ಲಿ ಕುಡಿಯಲು ಮತ್ತು ಗರಡಿ ಮನೆಗಳಿಗೆ ಕೆರೆಯ ನೀರನ್ನು ಬಳಸುತ್ತಿದ್ದೆವು. ಬಾಲ್ಯದಲ್ಲಿ ಕೆರೆನೀರು ಶುದ್ಧವಾಗಿತ್ತು. ನಮ್ಮ ಓರಗೆಯ ಹುಡುಗರೆಲ್ಲಾ ಇದೇ ಕೆರೆಯಲ್ಲಿ ಈಜು ಕಲಿತೆವು. ವರ್ಷಕೊಮ್ಮೆ ಮಾರಮ್ಮ ಮಹೇಶ್ವರಮ್ಮ ಲಕ್ಷ್ಮೀದೇವಿ ಜಾತ್ರೆಯಲ್ಲಿ ಕೆರೆಯಲ್ಲಿ ಹೂವು ಹೊಂಬಾಳೆ ಪೂಜೆ ನಡೆಯುತ್ತಿತ್ತು. ಗ್ರಾಮದೇವತೆಗಳಿಗೆ ಅಭಿಷೇಕಕ್ಕೆ ಕೆರೆಯ ನೀರನ್ನೇ ಬಳಸುತ್ತಿದ್ದೆವು. 35 ವರ್ಷಗಳಿಂದಲೂ ಕೆರೆಯ ನೀರು ಮಲಿನವಾಗಿದೆ. ಕೆರೆಯನ್ನು ದುರಸ್ತಿಪಡಿಸಿ ಜಲಮೂಲ ಉಳಿಸಬೇಕು ಶಂಕರಪ್ಪ ಪತ್ರ ಬರಹಗಾರ ಹೊಂಬಾಳಮ್ಮನಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT