ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನ ಸ್ವಾಭಿಮಾನ ದಿನಾಚರಣೆ 21ರಂದು

Last Updated 18 ನವೆಂಬರ್ 2019, 12:34 IST
ಅಕ್ಷರ ಗಾತ್ರ

ರಾಮನಗರ: ‘ಬುಡಕಟ್ಟು ಸಮುದಾಯಗಳ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಿರ್ಸಾ ಮುಂಡರವರ 144ನೇ ಜಯಂತ್ಯುತ್ಸವ ಹಾಗೂ ಗಿರಿಜನ ಸ್ವಾಭಿಮಾನ ದಿನವನ್ನು ಇದೇ 21ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು’ ವನವಾಸಿ ಕಲ್ಯಾಣದ ಜಿಲ್ಲಾ ಘಟಕದ ಖಜಾಂಚಿ ಆರ್.ಕೆ. ಸತೀಶ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1875ರ ನವೆಂಬರ್ 15ರಂದು ಜಾರ್ಖಂಡ್ ನ ರಾಂಚಿಯಲ್ಲಿ ಜನಿಸಿದ ಮುಂಡಾ ಜೀವಿಸಿದ್ದು 25 ವರ್ಷ ಮಾತ್ರ. ವನವಾಸಿ ಸಮುದಾಯದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆತ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿದ್ದನು. ತನ್ನ ಸಮುದಾಯಕ್ಕಾಗಿ ನಡೆದ ಹೋರಾಟದಲ್ಲಿ 1900ರ ಜೂನ್ 9 ರಂದು ಸೆರೆಮನೆಯಲ್ಲಿ ತನ್ನ ಜೀವವನ್ನು ಬಲಿದಾನ ಮಾಡಿದನು. ಅಂದಿನಿಂದ ಗಿರಿಜನ ಸಮುದಾಯ ತನ್ನ ಆರಾಧ್ಯದೈವವಾಗಿ ಪೂಜಿಸುತ್ತಾ ಬರುತ್ತಿದೆ’ ಎಂದು ಮಾಹಿತಿ ನೀಡಿದರು.

ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಬಿರ್ಸಾ ಮುಂಡ ಜಯಂತಿ ಆಚರಿಸಲಾಗುತ್ತಿದೆ. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಗಿರಿಜನರ ವೇಷಭೂಷಣಗಳೊಂದಿಗೆ ಶೋಭಯಾತ್ರೆ ನಡೆಯಲಿದೆ. ವೇದಿಕೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮದ್ ಇಕ್ರಮುಲ್ಲ ಷರೀಫ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು.

ವನವಾಸಿ ಕಲ್ಯಾಣದ ಸಹಶಿಕ್ಷಣ ಪ್ರಮುಖ್ ಮಂಜುನಾಥ್ ಎಸ್. ಮನಗೂಳಿ ಮಾತನಾಡಿ ವನವಾಸಿ ಕಲ್ಯಾಣ ಸಂಘಟನೆ ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಗಿರಿಜನರು ಸೇರಿದಂತೆ ಬುಡಕಟ್ಟು ಸಮುದಾಯವನ್ನು ಸಂಘಟಿಸುವ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಇರುಳಿಗರು, ಸೋಲಿಗರು, ಮೇದರು, ಕಾಡುಕುರುಬರು ಸೇರಿದಂತೆ ಬುಡಕಟ್ಟು ಸಮುದಾಯದ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದಾರೆ ಎಂದು ತಿಳಿಸಿದರು.

ಎಲ್ಲಾ ಬುಡಕಟ್ಟು ಸಮುದಾಯಗಳನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ `ಗಿರಿಜನ ಸ್ವಾಭಿಮಾನ ದಿನ' ಹಮ್ಮಿಕೊಳ್ಳಲಾಗಿದೆ. ಈ ಸಮುದಾಯಗಳ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ. ಅವರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.

ವನವಾಸಿ ಕಲ್ಯಾಣದ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್. ರಾಜು, ಸದಸ್ಯರಾದ ಮಹದೇವಯ್ಯ, ಅಪ್ಪಯ್ಯ, ಪುಟ್ಟಮಾದಯ್ಯ, ಚಿಕ್ಕಮಾದಯ್ಯ, ಮಂಜು ಬನ್ನಿಕುಪ್ಪೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT