ಭಾನುವಾರ, ಆಗಸ್ಟ್ 1, 2021
21 °C
'ಮೆಗಾಸಿಟಿ' ಪ್ರಸ್ತಾಪಿಸಿದರೆ ರೇಣುಕಾಚಾರ್ಯ ಅವರ ಜಾತಕವನ್ನು ನಾವು ಬಿಚ್ಚಿಡುತ್ತೇವೆ ಎಂದ ಬಿಜೆಪಿ ಕಾರ್ಯಕರ್ತರು

ಮುಖಕ್ಕೆ ಮಸಿ ಬಳಿಯುತ್ತೇವೆ: ರೇಣುಕಾಚಾರ್ಯಗೆ ಯೋಗೇಶ್ವರ್‌ ಬೆಂಬಲಿಗರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಶಾಸಕ ರೇಣುಕಾಚಾರ್ಯ ತಮ್ಮ ಹರುಕು ನಾಲಿಗೆಯನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಅವರ ಮುಖಕ್ಕೆ ಮಸಿ ಬಳಿಯಬೇಕಾಗುತ್ತದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಮುಖಂಡರು ಎಚ್ಚರಿಕೆ ನೀಡಿದರು.

ಪಟ್ಟಣದ ಕುವೆಂಪುನಗರ 5ನೇ ಅಡ್ಡರಸ್ತೆಯ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು, ‘ರೇಣುಕಾಚಾರ್ಯ ಯಾರನ್ನೋ ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡಿದರೆ ಯೋಗೇಶ್ವರ್ ಬೆಂಬಲಿಗರು ಸುಮ್ಮನೆ ಕೂರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರೇಣುಕಾಚಾರ್ಯ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಯೋಗೇಶ್ವರ್ ಅವರ ಮೆಗಾಸಿಟಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಯೋಗೇಶ್ವರ್ ಅವರು ನಿರ್ದೋಷಿ ಎಂದು ತೀರ್ಪು ನೀಡಿದೆ. ಅದರ ಬಗ್ಗೆ ಮಾತನಾಡಲು ರೇಣುಕಾಚಾರ್ಯ ಯಾರು ಎಂದು ಪ್ರಶ್ನಿಸಿದ ಪದಾಧಿಕಾರಿಗಳು, ರೇಣುಕಾಚಾರ್ಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ. ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮಿ ವಿಚಾರ ಎಲ್ಲರಿಗೂ ಗೊತ್ತಿದೆ. ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ. ರೇಣುಕಾಚಾರ್ಯ ಅವರ ಜಾತಕವನ್ನು ನಾವು ಬಿಚ್ಚಿಡಬೇಕಾಗುತ್ತದೆ’ ಎಂದು ಟಾಂಗ್ ನೀಡಿದರು.

‘ಯೋಗೇಶ್ವರ್ ಅವರು ಆಗಾಗ್ಗ ದೆಹಲಿಗೆ ಹೋಗಿ ಬರುತ್ತಿರುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಹಠ ತೊಟ್ಟಿರುವ ಯೋಗೇಶ್ವರ್ ಹೈಕಮ್ಯಾಂಡ್ ನೊಂದಿಗೆ ಈ ಸಂಬಂಧ ಚರ್ಚಿಸಲು ದೆಹಲಿಗೆ ಹೋಗುತ್ತಾರೆ. ಇದಕ್ಕೆ ವಿಶೇಷ ಅರ್ಥ ಬೇಡ. ಕೆಲವು ಮಂದಿ ಇದಕ್ಕೆ ಇಲ್ಲ ಸಲ್ಲದ ಬಣ್ಣ ಹಚ್ಚಿ ಯೋಗೇಶ್ವರ್ ಅವರ ವಿರುದ್ಧ ಸುಳ್ಳು ಸುಳ್ಳೇ ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಯೋಗೇಶ್ವರ್‌ಗೆ ಮುಖ್ಯಮಂತ್ರಿಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ. ಯೋಗೇಶ್ವರ್ ಅವರಿಗೆ ಬೆಲೆ ನೀಡುತ್ತಿಲ್ಲ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ನಡುವಿನ ಹೊಂದಾಣಿಕೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ವಿರೋಧ ಪಕ್ಷದ ನಾಯಕರೊಂದಿಗೆ ಯಡಿಯೂರಪ್ಪ ನಿಕಟಸಂಪರ್ಕ ಹೊಂದಿರುವ ಕಾರಣ ಪಕ್ಷ ಸಂಘಟನೆಗೆ ತೊಂದರೆಯಾಗುತ್ತಿದೆ’ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲವೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ನಗರ ಬಿಜೆಪಿ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ವಿ.ಬಿ.ಚಂದ್ರು, ಜೆ.ಬ್ಯಾಡರಹಳ್ಳಿ ರಾಮಚಂದ್ರು, ವಕೀಲ ಎಂ.ಕೆ.ನಿಂಗಪ್ಪ, ಎಂ.ಡಿ.ಕುಮಾರ್, ಶಿವಲಿಂಗಯ್ಯ, ಚಕ್ಕಲೂರು ಚೌಡಯ್ಯ, ಹುಣಸನಹಳ್ಳಿ ಕೃಷ್ಣಪ್ಪ, ಸದಾನಂದ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು