ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಾಯಕ್ಕೆ ಮುನ್ನುಡಿ ಬರೆದ ಮಳೆ

Last Updated 23 ಮೇ 2017, 9:54 IST
ಅಕ್ಷರ ಗಾತ್ರ

ರಾಮನಗರ: ಮುಂಗಾರು ಪೂರ್ವ ಮಳೆಯು ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದಿದ್ದು, ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯವು ಬಿರುಸಿನಿಂದ ಸಾಗಿದೆ. ಸದ್ಯ ರೈತರು ಹೊಲದಲ್ಲಿ ಅಲಸಂದೆ. ತೊಗರಿ ಬಿತ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಟ್ಟು 3900 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಗುರಿ ಇದ್ದು, ಪ್ರಸ್ತುತ ಸುಮಾರು 500 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಈ ಧಾನ್ಯಗಳನ್ನು ರೈತರು ಜಮೀನಿನಲ್ಲಿ ಚೆಲ್ಲಿದ್ದಾರೆ.

ಮಾಗಡಿ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಜಮೀನು ಬಿತ್ತನೆಗೆ ಒಳಪಡುತ್ತಿದ್ದು, ಉಳಿದ ಮೂರು ತಾಲ್ಲೂಕುಗಳಲ್ಲಿಯೂ ಕೃಷಿ ಚಟುವಟಿಕೆ ಕ್ರಮೇಣ ಚುರುಕು ಪಡೆದುಕೊಳ್ಳುತ್ತಿದೆ. ಈ ಬಾರಿಯ ಮುಂಗಾರಿನಲ್ಲಿ ಒಟ್ಟು 1.14 ಲಕ್ಷ ಹೆಕ್ಟೇರ್‌ನಷ್ಟು ಮಳೆ ಆಶ್ರಿತ ಪ್ರದೇಶದಲ್ಲಿ ಕೃಷಿ ಚಟುವಟಿಕೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿನ ಶೇ 65ರಷ್ಟು ಕೃಷಿ ಭೂಮಿಯಲ್ಲಿ ರಾಗಿ ಬೆಳೆಯಲಾಗುತ್ತಿದ್ದು, ಜುಲೈನಲ್ಲಿ ರಾಗಿ ಬಿತ್ತನೆ ಹೆಚ್ಚಾಗಿ ಇರಲಿದೆ. ಅದಕ್ಕೂ ಮುನ್ನದ ಅವಧಿಯಲ್ಲಿ ದ್ವಿದಳ ಧಾನ್ಯಗಳ ಬೆಳೆಗೆ ಹೆಚ್ಚಿನ ರೈತರು ಒಲವು ತೋರುತ್ತಿದ್ದಾರೆ.

ಬೀಜ ದಾಸ್ತಾನು: ಕೃಷಿ ಇಲಾಖೆಯು ಜಿಲ್ಲೆಯಲ್ಲಿನ 18 ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಅವಶ್ಯ ವಾದ ಬಿತ್ತನೆ ಬೀಜಗಳ ವಿತರಣೆಗೆ ಮುಂದಾಗಿದೆ. ಸದ್ಯ ಅಲಸಂದೆ, ತೊಗರಿ ದಾಸ್ತಾನು ಇದ್ದು, ನೆಲಗಡಲೆ, ಜೋಳ ಹಾಗೂ ರಾಗಿ ಬೀಜಗಳು ಇನ್ನೊಂದು ವಾರದಲ್ಲಿ ಬರಲಿವೆ. ರಸಗೊಬ್ಬರದ ದಾಸ್ತಾನು ತಕ್ಕ ಪ್ರಮಾಣದಲ್ಲಿ ಇದೆ   ಅಧಿಕಾರಿಗಳು.

ವಾಡಿಕೆಗಿಂತ ಹೆಚ್ಚು ಮಳೆ: ಈ ಬೇಸಿಗೆಯ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿರುವುದು ಕೃಷಿಕರಿಗೆ ವರವಾಗಿ ಪರಿಣಮಿಸಿದೆ. ಮೇ ತಿಂಗಳಿನಲ್ಲಿ ಈವರೆಗೆ ಸರಾಸರಿ 80.2 ಮಿಲಿ ಮೀಟರ್‌ನಷ್ಟು ಮಳೆ ಆಗಬೇಕಿತ್ತು. ಅದಕ್ಕೆ ಪ್ರತಿಯಾಗಿ 146.1 ಮಿಲಿ ಮೀಟರ್‌ನಷ್ಟು ಮಳೆ ಸುರಿದಿದ್ದು, ಶೇ 82ರಷ್ಟು ಮಳೆ ಹೆಚ್ಚಾಗಿದೆ. ಸದ್ಯ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಬಿಸಿಲು ಬಿದ್ದು ಹದವಾದಲ್ಲಿ ಕೃಷಿ ಕಾರ್ಯ ಇನ್ನಷ್ಟು ಚುರುಕಾಗಲಿದೆ.

ಎಳ್ಳು ಬಿತ್ತನೆಗೆ ಹಿನ್ನಡೆ: ಜಿಲ್ಲೆಯಲ್ಲಿ ಬೇಸಿಗೆಯ ಅವಧಿಯಲ್ಲಿ ಹೆಚ್ಚಾಗಿ ಎಳ್ಳು ಬೆಳೆಯಲಾಗುತ್ತಿದೆ. ಈ ವರ್ಷ ಸುಮಾರು 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಎಳ್ಳು ಬಿತ್ತನೆ ಗುರಿ ಇದ್ದು, ಏಪ್ರಿಲ್‌ನಲ್ಲಿ ಮಳೆಯ ಕೊರತೆಯಿಂದಾಗಿ ಕೇವಲ 460 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಏಪ್ರಿಲ್‌ನಲ್ಲಿ ವಾಡಿಕೆ ಮಳೆ 47.6 ಮಿ.ಮೀಟರ್‌ಗೆ ಪ್ರತಿಯಾಗಿ ಕೇವಲ 41.6 ಮಿ.ಮೀಟರ್‌ನಷ್ಟು ಮಳೆ ಬಿದ್ದಿತ್ತು.

ಮಣ್ಣು ಆರೋಗ್ಯ ಕಾರ್ಡ್‌ ಶೀಘ್ರ: ರೈತರು ಭೂಮಿಯ ಫಲವತ್ತತೆ ಆಧರಿಸಿ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ಅಗತ್ಯ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರ  ಬಳಸಿಕೊಳ್ಳಬೇಕು ಎನ್ನುವ ಆಶಯ ಹೊತ್ತು ಕೃಷಿ ಇಲಾಖೆಯು ಜಿಲ್ಲೆಯಲ್ಲಿ 19,800 ಮಣ್ಣು ಮಾದರಿ  ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಅವುಗಳ ವರದಿ ಸಿದ್ಧವಾಗುತ್ತಿದೆ. ಜಿಲ್ಲೆ ಯಲ್ಲಿ ಸುಮಾರು 2.7 ಲಕ್ಷ ರೈತರು ಇದ್ದು, ಅವರಿಗೆ ಮಣ್ಣು ಆರೋಗ್ಯ ಕಾರ್ಡ್‌ ವಿತರಣೆಯ ಗುರಿ ಹೊಂದಲಾಗಿದೆ.

ಮಳೆ ನೀರು ಸದ್ಬಳಕೆಗೆ ಸಲಹೆ
ಹೊಲಗಳಲ್ಲಿ ಬಿದ್ದ ನೀರು ಅಲ್ಲಿಯೇ ಇಂಗಬೇಕು, ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯು ಸಲಹೆ ನೀಡಿದೆ. ಹೆಚ್ಚೆಚ್ಚು ಬದುಗಳು, ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರು ಆದ್ಯತೆ ನೀಡುವಂತೆ ಕಿವಿಮಾತು ಹೇಳಿದೆ.

* * 

ಉತ್ತಮ ಮಳೆಯ ಹಿನ್ನೆಲೆಯಲ್ಲಿ ಅಲಸಂದೆ, ತೊಗರಿ ಬಿತ್ತನೆ ಚುರುಕಾಗಿದೆ. ಇನ್ನೆರಡು ವಾರದಲ್ಲಿ ಕೃಷಿ ಕಾರ್ಯ ಇನ್ನಷ್ಟು ಚುರುಕಾಗಲಿದೆ
ದೀಪಜಾ
ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT