ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಪ್ರವೇಶ ಪಡೆಯಲು ನಿರಾಸಕ್ತಿ

2019–20ನೇ ಸಾಲಿನಲ್ಲಿ 506 ಸೀಟುಗಳಿಗೆ 343 ಅರ್ಜಿ ಸಲ್ಲಿಕೆ
Last Updated 30 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಶಿವಮೊಗ್ಗ: ಬಡವರ ಪಾಲಿನ ಸಂಜೀವಿನಿ ಎಂದೇ ಕರೆಯಲ್ಪಡುತ್ತಿದ್ದ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಇದೀಗ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸುವವರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಈ ಹಿಂದೆ ಆರ್‌ಟಿಇ ಅಡಿಯಲ್ಲಿ ಸೀಟು ದಕ್ಕಿಸಿಕೊಳ್ಳುವುದೇ ಹರಸಾಹಸ ಎಂಬಂತಾಗಿತ್ತು.ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವಕಾಶ ವಂಚಿತ ಕುಟುಂಬಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಇಅಡಿ ಅರ್ಜಿ ಸಲ್ಲಿಸುತ್ತಿದ್ದರು. ಆದರೆ, ಸರ್ಕಾರ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದ ನಂತರ ಪೋಷಕರು ನಿರುತ್ಸಾಹ ತೋರುತ್ತಿದ್ದಾರೆ.

ಈ ಹಿಂದಿನ ವರ್ಷಗಳಲ್ಲಿಅರ್ಜಿ ಆಹ್ವಾನಿಸಿದ ಒಂದೆರಡು ವಾರಗಳಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಕಡಿಮೆ ಸೀಟುಗಳಿಗೆ ಅಧಿಕ ಅರ್ಜಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಮಾಡುವುದು ಕಷ್ಟವಾಗುತ್ತಿತ್ತು. ಅನೇಕರಿಗೆ ಸೀಟು ಸಿಗದ ಹಿನ್ನೆಲೆಯಲ್ಲಿ ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಅಥವಾ ದುಬಾರಿ ಬೆಲೆ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದರು. ಆದರೆ ಈ ವರ್ಷ ನಿಗದಿತ ಸೀಟುಗಳಿಗಿಂತ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನು ಗಮನಿಸಿ ಏ.15ರವರೆಗೆ ಇದ್ದ ಅರ್ಜಿ ಸಲ್ಲಿಸುವ ದಿನಾಂಕವನ್ನು ಏ.25ರವರೆಗೆ ವಿಸ್ತರಿಸಲಾಗಿತ್ತು. ಆದರೂ 2019–20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹಂಚಿಕೆಯಾಗಿರುವ 506 ಸೀಟುಗಳಿಗೆ ಕೇವಲ 343 ಅರ್ಜಿಗಳಷ್ಟೇ ಸಲ್ಲಿಕೆಯಾಗಿವೆ.

ಏನದು ತಿದ್ದುಪಡಿ:

ಈಗಆರ್‌ಟಿಇಅಡಿ ನೆರೆ ಹೊರೆ ಶಾಲೆಗಳಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗುತ್ತದೆ. ತಾವು ವಾಸಿಸುವ ಸ್ಥಳಗಳಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂಬ ನಿಯಮವನ್ನು ಜಾರಿಗೆ ತಂದಿದೆ. ಹಾಗಾಗಿ ಪೋಷಕರು ಅರ್ಜಿ ಸಲ್ಲಿಸಲು ನಿರುತ್ಸಾಹ ತೋರುತ್ತಿದ್ದಾರೆ. ಪರಿಣಾಮ ಇರುವ ಸೀಟುಗಳು ಭರ್ತಿ ಆಗದೇ ಉಳಿದಿವೆ.

2018–19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹಂಚಿಕೆಯಾಗಿದ್ದ 3,242 ಸೀಟುಗಳಿಗೆ 5,230 ಅರ್ಜಿಗಳು ಸಲ್ಲಿಕೆಯಾಗಿದ್ದವು. ಶಿವಮೊಗ್ಗ ನಗರವೊಂದರಲ್ಲೇ ಇದ್ದ 1,388 ಸೀಟುಗಳಿಗೆ ಬರೋಬ್ಬರಿ 2,443 ಅರ್ಜಿಗಳು ಬಂದಿದ್ದವು. ಉಳಿದಂತೆ ಭದ್ರಾವತಿಯಲ್ಲಿ ಹಂಚಿಕೆಯಾಗಿದ್ದ 742 ಸೀಟುಗಳಿಗೆ 1,407 ಅರ್ಜಿ, ಹೊಸನಗರ 103 ಸೀಟುಗಳಿಗೆ 90 ಅರ್ಜಿ, ಸಾಗರ 284 ಸೀಟುಗಳಿಗೆ 380 ಅರ್ಜಿ, ಶಿಕಾರಿಪುರ 413 ಸೀಟುಗಳಿಗೆ 573 ಅರ್ಜಿ, ಸೊರಬ 153 ಸೀಟುಗಳಿಗೆ 200 ಅರ್ಜಿ ಹಾಗೂ ತೀರ್ಥಹಳ್ಳಿಯ 159 ಸೀಟುಗಳಿಗೆ 137 ಅರ್ಜಿ ಸಲ್ಲಿಕೆಯಾಗಿದ್ದವು. ಆದರೆ ಈ ವರ್ಷ ಸೀಟುಗಳಿಗಿಂತ ಕಡಿಮೆಅರ್ಜಿಗಳು ಸಲ್ಲಿಕೆಯಾಗಿವೆ.

ಪೋಷಕರ ಆಕ್ರೋಶ: ‘ಆರ್‌ಟಿಇಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಸುತ್ತೋಲೆ ಹಿಂದುಳಿದ ಬಡ ಮಕ್ಕಳ ಶಿಕ್ಷಣ ಹಕ್ಕು ಕಸಿಯುವ ಹುನ್ನಾರವಾಗಿದೆ. ಹೊಸ ಸುತ್ತೋಲೆ ಪ್ರಕಾರ ಬಡ ಮಕ್ಕಳು ವಾಸಿಸುತ್ತಿರುವ ಪ್ರದೇಶದಿಂದ ಒಂದು ಕಿ.ಮೀ. ಸುತ್ತಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಿಲ್ಲ. ಇದರಿಂದ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಸರ್ಕಾರ ಕಸಿದುಕೊಳ್ಳುತ್ತಿದೆ’ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

2019–20ನೇ ಸಾಲಿನಲ್ಲಿ ಆರ್‌ಟಿಇ ಸೀಟು ಹಂಚಿಕೆ ವಿವರ:

ತಾಲ್ಲೂಕು–ಸೀಟು ಹಂಚಿಕೆ–ಸಲ್ಲಿಕೆಯಾದ ಅರ್ಜಿ

ಭದ್ರಾವತಿ–202–90

ಹೊಸನಗರ–10–09

ಸಾಗರ–25–37

ಶಿಕಾರಿಪುರ–69–125

ಶಿವಮೊಗ್ಗ–120–65

ಸೊರಬ–58–11

ತೀರ್ಥಹಳ್ಳಿ–22–06

ಒಟ್ಟು–506–343

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT