ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಕೋಟೆ ಮಾರಿಕಾಂಬಾ ಜಾತ್ರೆ ಆರಂಭ

Last Updated 25 ಫೆಬ್ರುವರಿ 2020, 7:01 IST
ಅಕ್ಷರ ಗಾತ್ರ

ಶಿವಮೊಗ್ಗ: ನಾಡಿಗರ ಮನೆಯಲ್ಲಿ ಪೂಜೆ ಸಲ್ಲಿಸಿ, ಗಾಂಧಿಬಜಾರ್‌ ತವರು ಮನೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವುದರೊಂದಿಗೆ ನಗರದ ಕೋಟೆ ಮಾರಿಕಾಂಬ ಜಾತ್ರೆ ಆರಂಭವಾಯಿತು. ಸಹ್ಯಾದ್ರಿ ತಪ್ಪಲಿನಲ್ಲಿ ಹರಿದು ಬರುವ ತುಂಗೆಯ ತಟದಲ್ಲಿ ಶಿವಮೊಗ್ಗದ ಗ್ರಾಮ ದೇವತೆಯಾಗಿ ಮಾರಿಕಾಂಬೆ ನೆಲೆನಿಂತಿದ್ದಾಳೆ.

ಶಿವಮೊಗ್ಗ ನಗರದ ಕೋಟೆ ಮಾರಿಕಾಂಬಾ ದೇವಸ್ಥಾನ ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಶಿವಪ್ಪನಾಯಕ (ಕೆಂಚಮಾರಿ) ಮಾರಿಕಾಂಬೆಗೆ ಪೂಜೆ ಸಲ್ಲಿಸಿಯೇ ಯುದ್ಧಕ್ಕೆ ಹೊರಡುತ್ತಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ.

ಇಡೀ ನಗರವನ್ನು ರಕ್ಷಣೆಮಾಡುವ ಜವಾಬ್ದಾರಿ ಶ್ರೀದೇವಿಗೆ ಸೇರಿರುವುದರಿಂದ ಜಾತ್ರಾ ಸಮಯದಲ್ಲಿ ಮಾತ್ರವಲ್ಲದೇ, ಎಲ್ಲಾ ಜನಾಂಗ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ ಧರ್ಮದವರೂ ದೇವಿಗೆ ಶುಕ್ರವಾರ ಮತ್ತು ಮಂಗಳವಾರ ಪೂಜೆ ಸಲ್ಲಿಸುತ್ತಾರೆ.

ಮನೆ, ಕುಟುಂಬ, ಆರೋಗ್ಯ ಉದ್ಯೋಗ, ವಿವಾಹ ಮುಂತಾದ ಸಮಸ್ಯೆಗಳನ್ನು ಹೊತ್ತು ತಾಯಿಯ ಸನ್ನಿಧಿಗೆ ಆಗಮಿಸುತ್ತಾರೆ. ಸಣ್ಣ ಮಕ್ಕಳಿಗೆ ಸಿಡುಬು, ದಡಾರ, ರೋಗ-ರುಜಿನಗಳು ಬಾಧಿಸಿದಾಗ ದೇವಿಯ ಸನ್ನಿಧಿಗೆ ಬಂದು ಮಾರಿ ಗದ್ದುಗೆಯ ಮೇಲೆ ಮಕ್ಕಳನ್ನು ಕೂರಿಸಿ, ಹರಕೆ ಹೊತ್ತು ಹೋಗುತ್ತಾರೆ. ನಂತರ ಬಂದು ಹರಕೆ ತೀರಿಸುತ್ತಾರೆ.

ಇನ್ನು ದೇವಿಗೆ ಭಕ್ತರು ಮೊಸರನ್ನು ಅರ್ಪಿಸುವುದು ಹಾಗೂ ನಿಂಬೆಹಣ್ಣಿನ ದೀಪ ಹಚ್ಚುವುದು ಇಲ್ಲಿಯ ಮತ್ತೊಂದು ವಿಶೇಷ. ಮೊಸರನ್ನವನ್ನು ಪ್ರಸಾದ ರೂಪದಲ್ಲಿ ಮಾಡಿಕೊಂಡು ಬಂದು ದೇವಿಗೆ ನೈವೇದ್ಯವಿಡುತ್ತಾರೆ.

ದೇವಾಲಯದ ಒಳಭಾಗದಲ್ಲಿ ನವದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಕರಿಬಾನಿ ಹಾಗೂ ಮಾತಂಗಮ್ಮನವರ ಗುಡಿಗಳನ್ನು ನಿರ್ಮಿಸಲಾಗಿದೆ. ಶ್ರಾವಣ ಮಾಸದಲ್ಲಿ ಮತ್ತು ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಮಾರಿಕಾಂಬಾ ಜಾತ್ರೆ ಇತಿಹಾಸ: ಜಾತ್ರೆಗೆ ಸುಮಾರು 600 ವರ್ಷಗಳ ಇತಿಹಾಸವಿದೆ. ಅಂದಿನಿಂದಲೂ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈಗಿನ ಶಿವಮೊಗ್ಗದ ಗಾಂಧಿ ಬಜಾರ್ ಅನ್ನು ಹಿಂದೆ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅದು ಮಾರಿಕಾಂಬೆಯ ತವರು ಮನೆಯೆಂದೇ ಖ್ಯಾತಿ ಪಡೆದಿದೆ.

ಮೊದಲು ಮಾರಿ ಗದ್ದಿಗೆ ಎಂಬ ಸ್ಥಳದಲ್ಲಿ ಯಾವ ದೇವಾಲಯವೂ ಇರಲಿಲ್ಲ. ಆದರೆ 1978 ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ಮೇಲೆ ಇಲ್ಲಿ ಒಂದು ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ.

ವಿಶ್ವಕರ್ಮ ಸಮುದಾಯದವರು ದೇವಿಯ ವಿಗ್ರಹವನ್ನು ನಿರ್ದಿಷ್ಟ ಮರದಲ್ಲಿ ನಿರ್ಮಿಸಿ, ಅದನ್ನು ಪೂಜಿಸಿದ ನಂತರವೇ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂಬ ವಾಡಿಕೆಯಿದ್ದರೂ, ನಾಡಿಗರ (ಬ್ರಾಹ್ಮಣ) ಮನೆತನದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆಯನ್ನು ಮಾಡುತ್ತಿದ್ದರು. ನಂತರ ಮಾರಿಕಾಂಬೆಯ ವಿಗ್ರಹವನ್ನು ನಿರ್ಮಿಸಿದ ವಿಶ್ವಕರ್ಮ ಜನಾಂಗದವರು ದೇವಿಯನ್ನು ಪೂಜಿಸುವ ಪದ್ಧತಿ ಬೆಳೆದು ಬಂದಿದೆ.

ಪ್ರಾರಂಭದಲ್ಲಿ ಇಲ್ಲಿ ಪ್ರಾಣಿಬಲಿ ಕೊಡುವ ಪದ್ಧತಿಯಿತ್ತು. ಆದರೆ, 1991 ರಂದು ದೇವಾಲಯದ ಉದ್ಘಾಟನೆಗೆ ಆಗಮಿಸಿದ್ದ ಶೃಂಗೇರಿ ಭಾರತೀ ತೀರ್ಥ ಶ್ರೀಗಳು ಬಲಿಕೊಡುವುದನ್ನು ನಿಷೇಧಿಸಿದರೆ ಮಾತ್ರ ಬರುವುದಾಗಿ ತಿಳಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿ ಇದಕ್ಕೆ ಒಪ್ಪಿ ಅಂದಿನಿಂದ ಬಲಿಕೊಡುವುದನ್ನು ನಿಷೇಧಿಸಿತು.

ಕೊನೆಯ ದಿನ ಅಂದರೆ ಐದನೆಯ ದಿನ ಮಹಾಮಂಗಳಾರತಿ, ಅದ್ದೂರಿ ಮೆರವಣಿಗೆಯ ನಂತರ ಊರ ಹೊರಗಿನ ಗಡಿಭಾಗಕ್ಕೆ ಕರೆದೊಯ್ದು ದೇವಿಯನ್ನು ವಿಸರ್ಜಿಸಲಾಗುವುದು.

25ರಿಂದ ಜಾತ್ರಾ ಮಹೋತ್ಸವ

ಶ್ರೀಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವು ಫೆ.25 ರಿಂದ 29ರವರೆಗೆ ನಡೆಯಲಿದೆ. ಇಂದು (ಫೆ.25) ಬೆಳಿಗ್ಗೆ ನಾಡಿಗರ ಮನೆಯಲ್ಲಿ ಪೂಜೆ ಸಲ್ಲಿಸಿ, ಗಾಂಧಿಬಜಾರ್‌ ತವರು ಮನೆಯಲ್ಲಿ ದೇವಿಯ ಪ್ರತಿಷ್ಠಾಪಿಸುವುದರೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಯಿತು. ಫೆ.29ರ ರಾತ್ರಿ ರಾಜಬೀದಿ ಉತ್ಸವದೊಂದಿಗೆ ದೇವಿಯನ್ನು ಬೀಳ್ಕೊಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT