ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ನೇ ವಾರ್ಡ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ?

Last Updated 21 ಫೆಬ್ರುವರಿ 2012, 8:55 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಸಭೆ ಉಪಾಧ್ಯಕ್ಷರಾಗಿದ್ದ ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದ ತೆರವಾದ 19ನೇ ವೆಂಕಟೇಶ ನಗರ ವಾರ್ಡ್‌ಗೆ ಫೆ. 26ರಂದು ಚುನಾವಣೆ ನಡೆಯಲಿದ್ದು, ಪ್ರಚಾರದ ಭರಾಟೆ ಕಾವೇರಿದೆ.

ಬಿಜೆಪಿಯಿಂದ ಶಿವಕುಮಾರ್ (ಬಟ್ಟೆ ಕುಮಾರ್), ಜೆಡಿಎಸ್‌ನಿಂದ ನಾಗರಾಜ ಕಂಕಾರಿ ಹಾಗೂ ಕಾಂಗ್ರೆಸ್‌ನಿಂದ ದೇವೇಂದ್ರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್ ಅಂತಿಮ ಸ್ಪರ್ಧೆಯಲ್ಲಿದ್ದಾರೆ.

19ನೇ ವೆಂಕಟೇಶ ನಗರ ವಾರ್ಡ್‌ನಲ್ಲಿ ಸುಮಾರು 5,600 ಮತದಾರರಿದ್ದು, ವೆಂಕಟೇಶ ನಗರ, ಅಚ್ಯುತರಾವ್ ಲೇಔಟ್, ರಾಜೇಂದ್ರನಗರ ಹಾಗೂ ಗಾಂಧಿನಗರ `ಎ~ ಬ್ಲಾಕ್ ವ್ಯಾಪ್ತಿ ಹೊಂದಿದೆ.   

ಅಬ್ಬರದ ಪ್ರಚಾರ: ಮೂರೂ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ಮುಳುಗಿವೆ. ಧ್ವನಿವರ್ಧಕಗಳ ಮೂಲಕ ಅಭ್ಯರ್ಥಿ ಮತ್ತು ಪಕ್ಷದ ಸಾಧನೆಗಳನ್ನು ಸಾರಲಾಗುತ್ತಿದೆ. ಅಭ್ಯರ್ಥಿಗಳು ಮನೆ, ಮನೆಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೇ, ತಮ್ಮ ತಮ್ಮ ಪಕ್ಷದ ಮುಖಂಡರೊಂದಿಗೆ ಎರಡು, ಮೂರು ಬಾರಿ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪಕ್ಷದ ಕಾರ್ಯಕರ್ತ. ಕಾಂಗ್ರೆಸ್ ಅಭ್ಯರ್ಥಿ ಕೆ. ದೇವೇಂದ್ರಪ್ಪ ಎನ್‌ಎಸ್‌ಯುಐ ಮಾಜಿ ಅಧ್ಯಕ್ಷ. ಜೆಡಿಎಸ್ ಅಭ್ಯರ್ಥಿ ನಾಗರಾಜ್ ಕಂಕಾರಿ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ.
ಆಡಳಿತಾರೂಢ ಬಿಜೆಪಿಗೆ ಈ ಚುನಾವಣೆ ಸವಾಲಿನದ್ದಾಗಿದ್ದು,

ಗೆಲುವಿಗೆ ಹಲವು ತಂತ್ರಗಳನ್ನು ರೂಪಿಸಿದೆ. ಸತ್ಯನಾರಾಯಣ (ಟೈಲರ್ ಸತ್ಯಣ್ಣ) ಅವರ ಸಾವಿನ ಅನುಕಂಪ ಪಡೆಯುವ ನಿಟ್ಟಿನಲ್ಲಿ ಅವರ ಹೆಸರನ್ನೇ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಧಾರಾಳವಾಗಿ ಬಳಕೆ ಮಾಡುತ್ತಿದೆ. ಟಿಕೆಟ್‌ನ್ನು ವಾರ್ಡ್‌ನ ಚಿರಪರಿಚಿತ ಕಾರ್ಯಕರ್ತ ಶಿವಕುಮಾರ್ ಅವರಿಗೆ ನೀಡುವ ಮೂಲಕ ಕ್ಷೇತ್ರದಲ್ಲಿರುವ ಸುಮಾರು 400ರಿಂದ 500 ತಮಿಳು ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

`ಸತ್ಯಣ್ಣ ಒಳ್ಳೆಯ ಮನುಷ್ಯ; ಆದರೆ,  ವಾರ್ಡ್‌ನಲ್ಲಿ ಕೆಲಸ ಮಾಡಿಸಲು ಅವರಿಂದ  ಸಾಧ್ಯವಾಗಲಿಲ್ಲ~  ಎಂಬ ಮಾತುಗಳು  ವಾರ್ಡ್‌ನ  ಜನರದ್ದು. ವಾರ್ಡ್‌ನಲ್ಲಿ  ಹಾದು ಹೋಗುವ ತುಂಗಾ ನಾಲೆನೀರು ಮಳೆಗಾಲದಲ್ಲಿ ಅಕ್ಕಪಕ್ಕದ ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿತ್ತು. ಅದನ್ನು ಪರಿಹರಿಸುವಲ್ಲಿ ಬಿಜೆಪಿ ಅರ್ಧ ಯಶಸ್ಸು ಕಂಡಿದೆ.

ಆದರೆ, ವೆಂಕಟೇಶನಗರದಲ್ಲಿ ಈಗಲೂ ಒಂದು ದಿವಸ ನೀರು ಬಂದರೆ ಇನ್ನೊಂದು ದಿವಸ ನೀರಿಲ್ಲ. ಸ್ವಚ್ಛತೆ ಇಲ್ಲವೇ ಇಲ್ಲ. ಕನಿಷ್ಠ ಇವರೆಡು ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸತ್ಯಣ್ಣ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಒತ್ತಡ ಹಾಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ ಎಂಬುದು ಜನರ ಅಸಮಾಧಾನ. ಮತದಾರರ ಈ ಪ್ರಶ್ನೆಗಳನ್ನು ಪಕ್ಷ ಹೇಗೆ ಎದುರಿಸುತ್ತದೆ ಎಂಬುದು ಈಗ ಕುತೂಹಲ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕೆ. ದೇವೇಂದ್ರಪ್ಪ ವಿದ್ಯಾರ್ಥಿಪರ ಹೋರಾಟಗಳಿಂದ ಗುರುತಿಸಿ ಕೊಂಡವರು. ಎನ್‌ಎಸ್‌ಯುಐ ಮಾಜಿ ಅಧ್ಯಕ್ಷರೂ ಕೂಡ. ಕ್ರಿಯಾಶೀಲ ವ್ಯಕ್ತಿತ್ವದ ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಇತ್ತೀಚೆಗೆ ಈ ವಾರ್ಡ್‌ನ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು.
 
ಆದರೆ, ಇವರಿಗೆ ಇದೇ ವಾರ್ಡ್‌ನ ಎನ್‌ಎಸ್‌ಯುಐ ಗರಡಿಯಲ್ಲೇ ಬೆಳೆದ ಮೋಹನ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಜತೆಗೆ, ದೇವೇಂದ್ರಪ್ಪ ಈ ವಾರ್ಡ್‌ನವರಲ್ಲ ಎಂಬ ಮಾತುಗಳಿವೆ.

ಕಳೆದ ಬಾರಿ ಅತಿ ಕಡಿಮೆ ಅಂತರದಿಂದ ವಿಜಯದ ಮಾಲೆ ಕಳೆದುಕೊಂಡ ನಾಗರಾಜ್ ಕಂಕಾರಿ ಈ ಬಾರಿ ಉತ್ಸಾಹದಲ್ಲಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳ ಅರಿವು ಅವರಿಗೆ ಇದೆ. ಕೆಲವು ಸೇವಾ ಕಾರ್ಯಗಳ ಮೂಲಕ ವಾರ್ಡ್‌ನಲ್ಲಿ ಚಿರಪರಿಚಿತರು. ವಾರ್ಡಿನಲ್ಲಿ ಪಕ್ಷದ ಬಲವಾದ ಅಸ್ವಿತ್ತ ಇಲ್ಲ ಎಂಬುದು ಇವರಿಗೆ ಸ್ವಲ್ಪ ತೊಡಕಾಗಬಹುದು ಎಂಬ ಮಾತುಗಳಿವೆ.

ಇವರಲ್ಲಿ ಯಾರೇ ಗೆದ್ದರೂ ಅವರ ಅಧಿಕಾರಾವಧಿ ಒಂಬತ್ತು ತಿಂಗಳು ಮಾತ್ರ. ಅಷ್ಟರ ಒಳಗೆ ಶಿವಮೊಗ್ಗ, ಮಹಾನಗರ ಪಾಲಿಕೆಯಾದರೆ ಅದೃಷ್ಟ ತಿರುಗಿ, ಪಾಲಿಕೆ ಸದಸ್ಯರಾಗುವ ಅವಕಾಶ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT