ಮಂಗಳವಾರ, ಜನವರಿ 19, 2021
27 °C

8ರಿಂದ ‘ಹಕ್ಕಿ ಕಥೆ’ ನಾಟಕ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಿರಿಯ ಸಾಹಿತಿ ನಾ. ಡಿಸೋಜಾ ಅವರ ಕಾದಂಬರಿ ಆಧಾರಿತ ‘ಹಕ್ಕಿ ಕಥೆ’ ಮಕ್ಕಳ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಜ.8 ಮತ್ತು 9ರಂದು ಪ್ರದರ್ಶಿಸಲಿದ್ದಾರೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.

‘ಎಸ್.ಮಾಲತಿ ಅವರು ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿದ್ದು, ಈ ನಾಟಕವನ್ನು ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಅವರು ನಿರ್ದೇಶಿಸಿದ್ದಾರೆ. ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜ. 8ರಂದು ಸಂಜೆ 6.15ರಿಂದ ನಾಟಕ ಆರಂಭವಾಗಲಿದೆ’ ಎಂದು ಬಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕೃತಿಯ ಇತರ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂಥದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟು ಏನು ಎಂಬುದು ಈ ನಾಟಕದಲ್ಲಿ ಅಡಕವಾಗಿದೆ. ಪಶ್ಚಿಮ ಘಟ್ಟಗಳ ಮೇಲಾಗುವ ಮನುಷ್ಯನ ಯಂತ್ರ ದಾಳಿಗೆ ಹೆದರಿ ಹಕ್ಕಿಗಳು ಕಾಡು ಬಿಡುತ್ತವೆ. ಅಲ್ಲಿಂದ ಶುರುವಾಗುವ ಆ ಜೀವಿಗಳ ಬದುಕು ದಾರುಣವಾಗುತ್ತಾ ಬರುವ ಚಿತ್ರಣ ಈ ನಾಟಕದಲ್ಲಿದೆ. ಕಾರ್ಖಾನೆಯ ವಿಷದ ಹೊಗೆ, ಡೈನಾಮೇಟ್‌ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಆವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ. ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರುಗಳ ಮೇಲೆ ಗೂಡು ಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುತ್ತದೆ. ಅಲ್ಲಿಗೂ ಬರುವ ಮನುಷ್ಯನ ಸ್ವಾರ್ಥ ಬುದ್ಧಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಉತ್ತರಿಸಿ ಬಿಡುತ್ತದೆ. ಇಂತಹ ಸನ್ನಿವೇಶಗಳು ನಾಟಕದಲ್ಲಿ ಚಿತ್ರಿತವಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಸಮಾಜದ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.