ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಗೆ ಹೊರಳಿದ ಫಾರ್ಮಾಸಿಸ್ಟ್- ಕೋವಿಡ್ ಕಾಲದ ಸಂಕಷ್ಟ ತೋರಿದ ಹೊಸ ದಾರಿ

Last Updated 3 ಆಗಸ್ಟ್ 2022, 5:48 IST
ಅಕ್ಷರ ಗಾತ್ರ

ಸಾಗರ: ಫಾರ್ಮಸಿಯಲ್ಲಿ ರ‍್ಯಾಂಕ್ ಪಡೆದು ಬೆಂಗಳೂರು, ಶಿವಮೊಗ್ಗದಲ್ಲಿ ಕೈತುಂಬ ಸಂಬಳ ಬರುವ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರು ಅದೆಲ್ಲವನ್ನೂ ತೊರೆದು ಹಳ್ಳಿಗೆ ಬಂದು ಹೈನುಗಾರಿಕೆ ಕೈಗೊಂಡ ವಿಶೇಷ ಕಥನವೊಂದು ಇಲ್ಲಿದೆ.

ಕೋವಿಡ್ ಸೃಷ್ಟಿಸಿದ ಹಲವು ರೀತಿಯ ತಲ್ಲಣಗಳಿಗೆ ಸಿಲುಕಿ ಅದಕ್ಕೆ ಪರ್ಯಾಯವಾಗಿ ತಮ್ಮದೇ ಆದ ಜೀವನ ಮಾರ್ಗ ಕಂಡುಕೊಂಡಿದ್ದಾರೆ ಗಜಾನನ ಶ್ಯಾನುಭಾಗ್‌.

ಸಾಗರದಲ್ಲಿ ‘ಮಹಾಲಕ್ಷ್ಮಿ’ ಕುಟುಂಬ ಎಂದರೆ ಗೊತ್ತಿಲ್ಲ ಎನ್ನುವವರು ವಿರಳ. ಸ್ವಾತಂತ್ರ್ಯ ದೊರಕಿದ ಕಾಲದಿಂದಲೂ ಈ ಭಾಗದಲ್ಲಿ ಮಹಾಲಕ್ಷ್ಮಿ ಮೆಡಿಕಲ್ಸ್ ಎಂಬ ಹೆಸರಿನಲ್ಲಿ ಔಷಧ ಮಳಿಗೆಯನ್ನು ತೆರೆದು ವ್ಯಾಪಾರ ನಡೆಸುತ್ತಿರುವ ಕಾರಣಕ್ಕೆ ಈ ಕುಟುಂಬ ಚಿರಪರಿಚಿತವಾಗಿದೆ. ಇದೇ ಕುಟುಂಬಕ್ಕೆ ಸೇರಿದವರು ಗಜಾನನ. ಈಗ ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿರುವ ಅವರು, ‘ನೆಮ್ಮದಿಯ ಅರಸುತ್ತ ಇಲ್ಲಿಗೆ ಬಂದೆ’ ಎನ್ನುತ್ತಿದ್ದಾರೆ.

ಪಿಯುಸಿ ನಂತರ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಫಾರ್ಮಸಿ ಶಿಕ್ಷಣಕ್ಕೆ ಸೇರಿದ್ದರು. ಮೊದಲ ವರ್ಷ ರಾಜ್ಯಕ್ಕೆ ಎರಡನೇ, ನಂತರದ ವರ್ಷ 9ನೇ ರ‍್ಯಾಂಕ್ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಗಜಾನನ, ಶಿಕ್ಷಣದ ನಂತರ ಕೆಲವು ವರ್ಷ ಸಾಗರದ ಮೆಡಿಕಲ್ ಶಾಪ್‌ನಲ್ಲಿದ್ದರು. ಬಳಿಕ ಬೆಂಗಳೂರಿನ ಫಾರ್ಮಾಸಿಸ್ಟ್ ಕಂಪನಿಯೊಂದರಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದರು.

ನಂತರ ಬೆಂಗಳೂರಿನ ಶಾಂತಿ ನಗರದಲ್ಲಿರುವ ಕ್ಯಾನ್ಸರ್ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಚೀಫ್ ಆಪರೇಟಿಂಗ್ ಆಫಿಸರ್, ಶಿವಮೊಗ್ಗದ ನಂಜಪ್ಪ ಲೈಫ್‌ಕೇರ್‌ನಲ್ಲಿ ಸೀನಿಯರ್ ಮ್ಯಾನೇಜರ್ (ಆಪರೇಷನ್ಸ್) ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಕೋವಿಡ್ ಅವಧಿ ಅವರ ಕುಟುಂಬ ಅನೇಕ ಕಹಿ ಅನುಭವಗಳಿಗೆ ಸಾಕ್ಷಿಯಾಯಿತು. ಮೆಡಿಕಲ್ ಕ್ಷೇತ್ರದಲ್ಲಿ ‘ಆತ್ಮಸಾಕ್ಷಿ’ಗೆ ಅನುಗುಣವಾಗಿ ಕೆಲಸ ಮಾಡುವುದು ಕಷ್ಟ ಎಂದು ಗಜಾನನ ಅವರಿಗೆ ಅನಿಸಿದ್ದರಿಂದ ನೌಕರಿ ಬಿಟ್ಟು ಸಾಗರಕ್ಕೆ ಮರಳಿ ಬಂದರು.

ಸಾಗರದಿಂದ 8 ಕಿ.ಮೀ. ದೂರದಲ್ಲಿ ಸಿರಿವಂತೆ ಸಮೀಪ ಹುಳೆಗಾರು ರಸ್ತೆಯಲ್ಲಿರುವ ಸುಂಕದೇವರಕೊಪ್ಪ ಗ್ರಾಮದಲ್ಲಿ ಮುಕ್ಕಾಲು ಎಕರೆ ಪ್ರದೇಶವನ್ನು ಏಳು ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಅಲ್ಲಿ ಹೈನುಗಾರಿಕೆಯನ್ನು ಆರಂಭಿಸಿದ್ದಾರೆ.

ಎಚ್.ಎಫ್. ಹಾಗೂ ಜರ್ಸಿ ತಳಿಯ ಎರಡು ಹಸುಗಳೊಂದಿಗೆ ಆರಂಭವಾದ ಇವರ ಫಾರ್ಮ್‌ನಲ್ಲಿ ಈಗ 10 ಹಸುಗಳಿವೆ. ಬೆಳಿಗಿನ ಜಾವದ 3.30ಕ್ಕೆ ಅವರ ದಿನಚರಿ ಆರಂಭವಾಗುತ್ತದೆ. ಇಬ್ಬರು ಕೆಲಸಗಾರರೊಂದಿಗೆ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ದನ– ಕರುಗಳಿಗೆ ಆಹಾರ ಉಣಿಸಿ ಹಾಲು ಕರೆದು ಮಾರಾಟಕ್ಕೆ ಒಯ್ಯುತ್ತಾರೆ. ದ್ವಿಚಕ್ರ ವಾಹನದಲ್ಲಿ ಸಾಗರದ ಹೋಟೆಲ್, ಮನೆ, ದೇವಸ್ಥಾನಗಳಿಗೆ ಸ್ವತಃ ಪೂರೈಸುತ್ತಾರೆ.

‘ಪ್ರತಿದಿನ 170 ಲೀಟರ್‌ ಹಾಲು ಸಿಗುತ್ತಿದೆ. ಹಾಲಿನೊಂದಿಗೆ ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪ ಹಾಗೂ ಕೊಟ್ಟಿಗೆಯಿಂದ ಸಿಗುವ ಸೆಗಣಿ ಗೊಬ್ಬರದ ಮಾರಾಟದಿಂದಲೂ ಆದಾಯ ಬರುತ್ತಿದೆ. ಪ್ರತಿ ತಿಂಗಳು ₹ 1.5 ಲಕ್ಷಕ್ಕೂ ಅಧಿಕ ಮೊತ್ತದ ವಹಿವಾಟು ಆಗುತ್ತಿದೆ’ ಎನ್ನುತ್ತಾರೆ ಗಜಾನನ.

ಹೀಗೆ ನಗರ ಪ್ರದೇಶದ ವಾತಾವರಣ ತೊರೆದು ಮಲೆನಾಡಿನ ಹಸಿರಿನ ನಡುವೆ ಹೊಸದಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಗಜಾನನ ಮುಂದಾಗಿದ್ದಾರೆ. ಆಧುನಿಕ ಸೌಲಭ್ಯ, ಉತ್ತಮ ಆದಾಯ ಇವೆಲ್ಲದಕ್ಕಿಂತ ಬದುಕಿನಲ್ಲಿ ‘ನೆಮ್ಮದಿ’ಯೇ ಮುಖ್ಯ ಎಂಬ ಸತ್ಯವನ್ನು ಅವರು ಕಂಡುಕೊಂಡಿದ್ದಾರೆ.

***

ಈ ಹಿಂದೆ ನಗರ ಪ್ರದೇಶದಲ್ಲಿದ್ದಾಗ ಇರುವಷ್ಟು ಆದಾಯ ಈಗಿಲ್ಲ. ಆದರೆ ಧಾವಂತ, ಒತ್ತಡಗಳಿಲ್ಲದ ರೀತಿಯಲ್ಲಿ ಬದುಕಬೇಕು ಎಂಬ ಸಂಕಲ್ಪ ಮಾಡಿದ್ದು, ಹೈನುಗಾರಿಕೆ ಕೈಗೊಳ್ಳಲು ಅವಕಾಶವಾಯಿತು. ಇಂತಹ ತೀರ್ಮಾನ ಕೈಗೊಳ್ಳಲು ನನ್ನ ಪತ್ನಿ ಸ್ಮಿತಾ ಸಹಕಾರ ಕೂಡ ಇರುವುದನ್ನು ಮರೆಯುವಂತಿಲ್ಲ.

-ಗಜಾನನ ಶ್ಯಾನುಭಾಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT