ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪ ಬಂಡವಾಳದಲ್ಲಿ ಅಪಾರ ಸಂಪಾದನೆ; ಎಲಕ್ಕಿಕೊಪ್ಪ ಕೃಷಿಕನ ಸಾಧನೆ

ಎಲಕ್ಕಿ ಕೊಪ್ಪ ಕೃಷಿಕ ನಾಗರಾಜ್‌ ಸಾಧನೆ
Last Updated 15 ಜೂನ್ 2022, 4:42 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಕೃಷಿ ಕಾಯಕ ಎಂದರೆ ಒಂದು ಹೆಜ್ಜೆ ಹಿಂದಕ್ಕೆ ಹೋಗುವ ಈ ಕಾಲದಲ್ಲಿ ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ಏಲಕ್ಕಿಕೊಪ್ಪದ ಕೃಷಿಕ ನಾಗರಾಜಪ್ಪ ಗೌಡ ಅವರು ತಮ್ಮ ಜಮೀನಿನಲ್ಲಿ ಕಡಿಮೆ ಬಂಡವಾಳದಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

ತಂದೆ ಏಲಕ್ಕಿಕೊಪ್ಪದ ತಿಮ್ಮಪ್ಪ ಅವರು ಅರ್ಧ ಎಕರೆ ಅಡಿಕೆ ತೋಟ ಮಾಡಿ, ಉಳಿದ 15 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದರು. ಕೃಷಿ ಕಾಯಕ ಶ್ರಮದಾಯಕವೆಂದು ಭಾವಿಸಿ, ಮಕ್ಕಳು ಇದರಿಂದ ಮುಕ್ತಿ ಪಡೆದು ವಿದ್ಯಾವಂತರಾಗಿ ಸರ್ಕಾರಿ ಉದ್ಯೋಗ ಪಡೆಯಲಿ ಎಂಬ ಕನಸು ಕಂಡಿದ್ದರು.

ಆದರೆ, ಅವರ ಹಿರಿಯ ಮಗ ನಾಗರಾಜಪ್ಪ ಗೌಡ ಪದವಿ ವ್ಯಾಸಂಗ ಮುಗಿಸಿ ತಂದೆಯೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಕಡಿಮೆ ಬಂಡವಾಳದಲ್ಲಿ ಸಾವಯವ ಕೃಷಿ ಆರಂಭಿಸಿ, ಇಂದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

40 ಎಕರೆ ಜಮೀನಿನ ಕಾರ್ಯಕ್ಕೆ ಕೇವಲ 3ರಿಂದ 4 ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರದ ಬದಲಿಗೆ ಕೊಟ್ಟಿಗೆ ಗೊಬ್ಬರ ಬಳಸುವ ಅವರು, ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ತೋಟ ನಿರ್ವಹಣೆಯಲ್ಲಿ ತೊಡಗಿರುವುದು ಇತರರಿಗೂ ಮಾದರಿ.

15 ವರ್ಷಗಳ ಹಿಂದೆ ಅಪ್ಪ ಬೆಳೆಸಿದ ಅರ್ಧ ಎಕರೆ ಅಡಿಕೆ ತೋಟವನ್ನೇ ಪ್ರಯೋಗಶಾಲೆ ಆಗಿಸಿಕೊಂಡ ಅವರು, ಸಂಪೂರ್ಣ ನೈಸರ್ಗಿಕ ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆದರು. ಸರಾಸರಿ ಒಂದು ಮರಕ್ಕೆ ಎರಡರಿಂದ ಎರಡುವರೆ ಕೆ.ಜಿ. ಅಡಿಕೆ ಕೈಗೆ ಬಂದಿತ್ತು. ಆ ವರ್ಷ ಒಂದು ಮರಕ್ಕೆ ಅವರು ವೆಚ್ಚ ಮಾಡಿದ್ದು ಕೇವಲ ₹ 100. ಇದನ್ನೇ ಸ್ಫೂರ್ತಿಯಾಗಿ ಪಡೆದು, ಅಡಿಕೆ ತೋಟವನ್ನು 6 ಎಕರೆಗೆ ವಿಸ್ತರಿಸಿ, ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

‘ಇಂದಿನ ಮಾರುಕಟ್ಟೆ ಧಾರಣೆಯಂತೆ ಒಂದು ಮರಕ್ಕೆ ಸರಾಸರಿ ₹ 1000 ದರ ಸಿಕ್ಕಿದೆ. ಒಂದು ಎಕರೆಯಲ್ಲಿ 600
ಮರಗಳಿವೆ ಆದಾಯ ನೀವೇ ಲೆಕ್ಕಹಾಕಿ’ ಎನ್ನುತ್ತಾರೆ ನಾಗರಾಜ್‌.

‘ನಮ್ಮದು ಮೂಲತಃ ಕೃಷಿ ಕುಟುಂಬ. ಬೇರೆಯವರ ಕೈಕೆಳಗೆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ, ಕೃಷಿಯಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ.

‘ಅಂದಾಜು 15 ಎಕರೆ ಭತ್ತದ ಕೃಷಿ ಭೂಮಿಯನ್ನು ಹೊಂದಿದ್ದ ನಾವು ಈಗ ಕೇವಲ 2 ಎಕರೆಗೆ ಸೀಮಿತಗೊಳಿಸಿದ್ದೇವೆ. ಸಾವಯವ ಪದ್ದತಿ ಅನುಸರಿಸಿ ಮನೆ ಬಳಕೆಗೆ ಬೇಕಾಗುವಷ್ಟು ಭತ್ತವನ್ನು ಮಾತ್ರ ಬೆಳೆಯುತ್ತಿದ್ದೇವೆ. ಜಮೀನಿನಲ್ಲಿ ಇರುವ ಕೃಷಿ ಹೊಂಡದಲ್ಲಿ ಮೀನು ಸಾಕಣೆ ಮಾಡುತ್ತಿದ್ದು, ಮನೆ ಬಳಕೆ ಹಾಗೂ ಕಾರ್ಮಿಕರಿಗೆ ಮೀಸಲಿಟ್ಟಿದ್ದೇವೆ’ ಎಂದು ತಿಳಿಸಿದರು.

ವಿವಿಧ ಬೆಳೆ; ಅಕ್ಕಪಕ್ಕದವರ ಅನುಕರಣೆ

15 ಎಕರೆ ಅಡಿಕೆ, 10 ಎಕರೆ ರಬ್ಬರ್‌, 10 ಎಕರೆ ನೀಲಗಿರಿ, 2 ಎಕರೆ ತೆಂಗಿನ ತೋಟ ಹೊಂದಿರುವ ಇವರು, ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಡಿಕೆ ತೋಟದ ಮಧ್ಯೆ ಕಾಳುಮೆಣಸು, ಬಾಳೆ, ಮಾವು, ಏಲಕ್ಕಿ, ನಿಂಬೆ ಬೆಳೆದಿದ್ದಾರೆ. ‘ಇವು ಮನೆ ಖರ್ಚನ್ನು ನಿಭಾಯಿಸುತ್ತವೆ. ನಮ್ಮನ್ನು ನೋಡಿ ಈಗ ಅಕ್ಕಪಕ್ಕದವರೂ ಈ ಮಾದರಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT