ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯತ್ವದ ತಳಹದಿಯೇ ಅಂಬೇಡ್ಕರ್ ಧರ್ಮ

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಪ್ರೊ.ಕೆ.ಎನ್.ಮಹಾದೇವಸ್ವಾಮಿ
Last Updated 26 ಏಪ್ರಿಲ್ 2021, 15:23 IST
ಅಕ್ಷರ ಗಾತ್ರ

ಶಿವಮೊಗ್ಗ: ಅವಮಾನಗಳ ಕುಲುಮೆಯಲ್ಲಿ ಬೆಂದ ಡಾ.ಅಂಬೇಡ್ಕರ್ ಅವರಿಗೆ ಮನುಷ್ಯತ್ವವೇ ನಿಜವಾದ ಧರ್ಮವಾಗಿತ್ತು ಎಂದು ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎನ್.ಮಹಾದೇವಸ್ವಾಮಿ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಂಕ, ಚಕ್ರ, ಖಡ್ಗಗಳಿಲ್ಲದೆ ಕೇವಲ ಸಂವಿಧಾನ ಎಂಬ ಅಸ್ತ್ರದಿಂದಲೇ ಶಾಂತಿಯುತ ಹಾಗೂ ಸಾಮಾಜಿಕ ಹೊಣೆಗಾರಿಕೆ ಗೆದ್ದ ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚಿಕೊಂಡ ನಾಯಕ ಎಂದು ಬಣ್ಣಿಸಿದರು.‌

ಬೀದಿದೀಪದಲ್ಲಿ ಕೂತು ಓದಿ ಶಿಕ್ಷಣ ಪಡೆದ ಅಂಬೇಡ್ಕರ್ ಅವರು ದಲಿತರಿಗೆ ಸ್ವಾಭಿಮಾನದ ಬದುಕು ಕೊಟ್ಟವರು. ಮಹಿಳೆಯರಿಗೆ ಸ್ಥಾನಮಾನ ನೀಡಿದವರು. ಸಂವಿಧಾನವೇ ಧರ್ಮ ಎಂದುಕೊಂಡವರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸಂವಿಧಾನದ ಮೂಲಕವೇ ತಿಳಿಸಿದವರು. ಆದರೆ, ಇಂದು ನಾವು ಅವರನ್ನು ಮತ್ತು ಅವರ ತತ್ವ ಸಿದ್ಧಾಂತಗಳನ್ನು ಬೇರೆ ದಿಕ್ಕಿನತ್ತ ತೆಗೆದುಕೊಂಡು ಹೋಗುತ್ತಿರುವುದು ವಿಷಾದನೀಯ ಎಂದರು.

ಇಡೀ ಜಗತ್ತು ಒಪ್ಪಿಕೊಂಡ ಸಂವಿಧಾನವನ್ನು ಕೊಟ್ಟ ಧೀರ ನಾಯಕ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಲಹೆ ನೀಡಿದರು.

‘ಮಾನವೀಯತೆಯೇ ಧರ್ಮದ ಮುಖ್ಯಗುಣ ಎಂದುಕೊಂಡು ಅವರು ಭೌದ್ಧ ಧರ್ಮವನ್ನು ಸೇರಿಕೊಂಡರು. ಮತಾಂತರಗೊಂಡ ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿದರು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಅವರ ಸಾವು ಇನ್ನೂ ನಿಗೂಢವಾಗಿದೆ. ಪತ್ರಿಕೆಯೊಂದು ಅವರಿಗೆ ವಿಷ ನೀಡಲಾಗಿತ್ತು ಎಂದು ಬರೆದಿತ್ತು. ಈ ಉಲ್ಲೇಖ ನಿಜವೇ ಆಗಿದ್ದರೆ ಇದಕ್ಕಿಂತ ವಿಷಾದದ ಘಟನೆ ಇನ್ನೊಂದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ‘ಅವಮಾನದ ನಡುವೆ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅವರ ಬದುಕು ವಿಸ್ಮಯ. ಜಾತಿ ವ್ಯವಸ್ಥೆಯನ್ನು, ಸಮ ಸಮಾಜವನ್ನು ನಿರ್ಮಿಸಲು ಅವರ ಪ್ರಯತ್ನ ಅವಿಸ್ಮರಣೀಯ’ ಎಂದು ಬಣ್ಣಿಸಿದರು.

‘ಯಾವ ದೇಶದಲ್ಲೂ ಸಿಗದ ಸಂವಿಧಾನ ನಮ್ಮ ಭಾರತಕ್ಕೆ ದೊರಕಿದೆ. ಇಂತಹ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವ ಮೂರ್ಖರು ನಮ್ಮಲ್ಲಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗಲೇ ಅದನ್ನು ವಿರೋಧಿಸುವವರಿದ್ದರು. ಈಗಲೂ ವಿರೋಧಿಸುವವರು ಇದ್ದಾರೆ. ಮನುಷ್ಯ ಮನುಷ್ಯನನ್ನಾಗಿ ನೋಡಲು ಇಷ್ಟಪಡದ ಕೆಟ್ಟ ಮನುಷ್ಯರು ಇಂತಹ ದೃಷ್ಟಿಕೋನಗಳನ್ನು ಇಟ್ಟುಕೊಳ್ಳಲು ಸಾಧ್ಯ’ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್.ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಜನಶಕ್ತಿ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಎಂ.ಆರ್.ಶಿವಕುಮಾರ್ ಆಸ್ತಿ, ಎಂ.ಮಂಜುನಾಥ್, ರುದ್ರಮ್ಮ, ಜಗ್ಗು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT