ಸೋಮವಾರ, ಅಕ್ಟೋಬರ್ 18, 2021
28 °C
ಹೇಳಲಷ್ಟೇ ಪಟ್ಟಣ ಪಂಚಾಯಿತಿ; ಸಂಚಾರಕ್ಕೆ ಕಚ್ಚಾ ರಸ್ತೆಯೇ ಗತಿ

ಡಾಂಬರು ಕಾಣದ ಆನವಟ್ಟಿ ರಸ್ತೆಗಳು

ರವಿ ಆರ್. ತಿಮ್ಮಾಪುರ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಸಂತೆ ಮಾರುಕಟ್ಟೆಯ ಬೀದಿಗಳು ಸೇರಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ.

ಆನವಟ್ಟಿ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ವರ್ಷದಿಂದ ಚುನಾವಣೆ ನಡೆಯದ ಕಾರಣ ಜನಪ್ರತಿನಿಧಿಗಳು ಇಲ್ಲ. ವಾರ್ಡ್‌ಗಳ ಸಮಸ್ಯೆ ಆಲಿಸುವವರು ಯಾರೂ ಇಲ್ಲದಂತಾಗಿದೆ. ಕೆಸರು ಗದ್ದೆಯಂತಹ ರಸ್ತೆಯಲ್ಲೇ ನೌಕರರು, ವೃದ್ಧರು, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಓಡಾಡುವ ಸ್ಥಿತಿ ಇದೆ.

ಅಭಿವೃದ್ಧಿಯಿಂದ ದೂರವಿರುವ ತಲ್ಲೂರು ಗಡಿ ಭಾಗದ ರಾಘವನಗರ, ಬಸವೇಶ್ವರ ನಗರ, ಕುಬಟೂರು ಗಡಿ ಭಾಗದ ಶಿಕ್ಷಕರ ಬಡಾವಣೆ ಸೇರಿ ವಿವಿಧ
ಬಡಾವಣೆಗಳು ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿವೆ. ರಸ್ತೆ, ಚರಂಡಿ ಅಭಿವೃದ್ಧಿಯಾಗುತ್ತವೆ ಎಂಬ ಅಲ್ಲಿನ ನಿವಾಸಿಗಳ ನಿರೀಕ್ಷೆ ಹುಸಿಯಾಗಿದೆ. 

45 ವರ್ಷಗಳಿಂದ ಅಭಿವೃದ್ಧಿ ಕಾಣದ ಪ್ರವಾಸಿ ಮಂದಿರಪಕ್ಕದ ನೆಹರೂ ನಗರ ಬಡಾವಣೆ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರು ಆಗ್ರಹ. 

‘ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕುಬಟೂರಿನ ಆಂಜನೇಯ ದೇವಸ್ಥಾನದ ಎದುರಿನ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ರಸ್ತೆ
ಯಲ್ಲೆಲ್ಲಾ ಗುಂಡಿಗಳು ಬಿದ್ದಿವೆ. ಮಳೆ ನೀರಿನಿಂದ ರಸ್ತೆ ಕೆಸರುಮಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸುತ್ತಾರೆ ಮಾಜಿ ಸೈನಿಕ ಲಕ್ಷಣಪ್ಪ.

ಕುಬಟೂರು ಗ್ರಾಮ ಪಂಚಾಯಿತಿ ಪಕ್ಕದ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ. ಆನವಟ್ಟಿ ಪಟ್ಟಣ ಪಂಚಾಯಿತಿಗೆ ಸೇರಿರುವ ಗ್ರಾಮಗಳ ಹಾಗೂ ಪಟ್ಟಣದ ಪ್ರಮುಖ ಬೀದಿಗಳ ರಸ್ತೆಗಳೂ ಹಾಳಾಗಿವೆ. ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸುತ್ತಾರೆ ಗಿರಿಜಮ್ಮ.

ಆಸ್ಪತ್ರೆಗೆ ಹೋಗಲೂ ಪರದಾಟ...

‘ನನ್ನ ಪತ್ನಿಗೆ ಡಯಾಲಿಸಿಸ್ ಮಾಡಿಸಲು ಎರಡು ದಿನಕ್ಕೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಕೆಸರು ತುಂಬಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಿಸಲು ಸಾಧ್ಯವಿಲ್ಲ. ನಡೆದುಕೊಂಡು ಹೋಗಲು ಪತ್ನಿಗೆ ಆಗುವುದಿಲ್ಲ. ಆಟೊ ಇತರೇ ವಾಹನ ಬಾಡಿಗೆ ಪಡೆದು ಹೋಗಬೇಕು. ಕೆಲವು ವೇಳೆ ರಸ್ತೆ ನೋಡಿ ವಾಹನ ಚಾಲಕರು ಬರಲು ಹಿಂದೇಟು ಹಾಕುತ್ತಾರೆ. ರಾಘವ ಬಡಾವಣೆಯ ರಸ್ತೆಗಳಿಗೆ ಕನಿಷ್ಠ ಜಲ್ಲಿಕಲ್ಲನ್ನಾದರೂ ಹಾಕಿ ನಿವಾಸಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸುತ್ತಾರೆ ಮಾಜಿ ಸೈನಿಕ ಲಕ್ಷಣಪ್ಪ.

ಮಳೆಯಿಂದ ಹಾನಿಗೆ ಒಳಗಾದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 16 ಕಿ.ಮೀ. ಒಳ ರಸ್ತೆಗಳ ದುರಸ್ತಿಗೆ ಅರ್ಜಿ ಸಲ್ಲಿಸಲಾಗಿದೆ. ಹಣ ಮಂಜೂರು ಆದ ತಕ್ಷಣ ರಸ್ತೆಗಳನ್ನು ಸರಿಪಡಿಸಲಾಗುವುದು.
ರವಿಕುಮಾರ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

ರಸ್ತೆ ಸರಿಪಡಿಸಲು ಹಲವು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ. ಚುನಾವಣೆ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು ಬಳಿಕ ಇತ್ತ ಭೇಟಿ ನೀಡುವುದಿಲ್ಲ.
ರಾಘವ ಬಡಾವಣೆ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.