ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ನಿವೇಶನ ಹಗರಣ: ಸಿಒಡಿ ತನಿಖೆಗೆ ಒತ್ತಾಯ

Last Updated 23 ಸೆಪ್ಟೆಂಬರ್ 2021, 4:06 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ನಗರಸಭೆಯಲ್ಲಿನಡೆದಿರುವ ಆಶ್ರಯ ನಿವೇಶನ ಹಗರಣದ ತನಿಖೆಯನ್ನು ಸಿಒಡಿಗೆ ಒಪ್ಪಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಕೆ. ಸಿದ್ದಪ್ಪ ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ಹಕ್ಕುಪತ್ರವನ್ನು ಸೃಷ್ಟಿಸಿ ಬಡವರನ್ನು ವಂಚಿಸಲಾಗಿದೆ. ಒಂದೇ ನಿವೇಶನಕ್ಕೆ ಎರಡು ಹಕ್ಕುಪತ್ರ ನೀಡಲಾಗಿದ್ದು, ಇಬ್ಬರ ಹೆಸರಿಗೆ ಖಾತೆ ಕೂಡ ಆಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ’ ಎಂದು ಒತ್ತಾಯಿಸಿದರು.

‘ಆಶ್ರಯ ನಿವೇಶನವೊಂದಕ್ಕೆಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ನೋಂದಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್. ಹಾಲಪ್ಪ ಹರತಾಳು ಅವರು 15 ದಿನಗಳ ಹಿಂದೆ ನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದೇ ಇರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ’ ಎಂದು ದೂರಿದರು.

‘ನಗರಸಭೆಯಿಂದ ಅತ್ಯುತ್ತಮ ಆಡಳಿತ ನೀಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳುತ್ತಾರೆ. ಆದರೆ ನಗರದ ಬಹುತೇಕ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಬೀದಿ ಬದಿಯ ವ್ಯಾಪಾರಿಗಳಿಗೆ ಫುಡ್ ಕೋರ್ಟ್ ನಿರ್ಮಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದು ಬಿಟ್ಟರೆ ಅದು ಕಾರ್ಯಗತಗೊಂಡಿಲ್ಲ’ ಎಂದು ಆರೋಪಿಸಿದರು.

‘ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ನಿರ್ಮಿಸಿದ ವಿಜಯನಗರ ಬಡಾವಣೆಯ ಈಜುಕೊಳ, ಗೋಪಾಲಗೌಡ ಕ್ರೀಡಾಂಗಣದ ಪಕ್ಕದಲ್ಲಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಮುಗಿದು ಮೂರು ವರ್ಷವಾಗಿದ್ದರೂ ಇನ್ನೂಉದ್ಘಾಟನೆಯಾಗಿಲ್ಲ. ನಗರಸಭೆಗೆ ಯಾವುದೇ ವಿಶೇಷ ಅನುದಾನ ತರುವಲ್ಲಿ ಶಾಸಕ ಹಾಲಪ್ಪ ಹರತಾಳು ವಿಫಲರಾಗಿದ್ದಾರೆ’ ಎಂದುದೂರಿದರು.

ಪ್ರಮುಖರಾದ ವಸಂತ ಶೇಟ್, ನಾಗೇಶ್ ಎಂ.ವಿ, ನಾಗವೇಣಿ, ಪಾರ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT