ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ಕೊನೆಗೂ ಕೂಡಿಬಂತು ಮುಹೂರ್ತ

Last Updated 25 ಜುಲೈ 2021, 3:56 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದಲ್ಲಿ ಶನಿವಾರ ನಡೆದ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಕಳೆದ ಮೂರು ವರ್ಷಗಳಿಂದ ಅನಾಥವಾಗಿ ಬಿದ್ದಿದ್ದ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ನಗರದ ಡಿವಿಎಸ್‌ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಬಸವೇಶ್ವರ ಪುತ್ಥಳಿಯನ್ನು ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುಯಲ್ ಮೂಲಕ ಅನಾವರಣಗೊಳಿಸಿದರು.

ಮೂರು ವರ್ಷಗಳ ಹಿಂದೆ ಲಂಡನ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಸವೇಶ್ವರ ಪುತ್ಥಳಿಯನ್ನು ಫೌಂಡೇಷನ್‌ ಅಧ್ಯಕ್ಷ ಡಾ.ನೀರಜ್ ಪಾಟೀಲ್ ದಾನವಾಗಿ ನೀಡಿದ್ದರು.

ಶಿವಮೊಗ್ಗ ಬಸವೇಶ್ವರ ವೃತ್ತದ ಸಮೀಪ ಗಾಂಧಿ ಪಾರ್ಕ್‌ ಆವರಣದಲ್ಲಿ 3 ಅಡಿ ಎತ್ತರದ ಕಂಚಿನ ಪುತ್ಥಳಿ ಸ್ಥಾಪಿಸಲು ಸಿದ್ಧತೆ ನಡೆದಿತ್ತು. ಆದರೆ, ಕಾನೂನು ತೊಡಕುಗಳ ಕಾರಣ ಸ್ಥಾಪನೆ ಕಾರ್ಯ ನನೆಗುದಿಗೆ ಬಿದ್ದಿತ್ತು. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತು ಶನಿವಾರ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಪಾಲಿಕೆಯಲ್ಲಿದ್ದ ಪ್ರತಿಮೆಯನ್ನು ಶುಕ್ರವಾರ ಸಂಜೆಯೇ ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ತಂದಿಡಲಾಗಿತ್ತು. ಐತಿಹಾಸಿಕ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಸಾಕ್ಷಿಯಾದರು.

ಶುಕ್ರವಾರವೇ ಪ್ರತಿಷ್ಠಾಪನೆ ಸಂಭ್ರಮ ಮನೆ ಮಾಡಿತ್ತು. ಭವ್ಯವಾದ ವೇದಿಕೆ ನಿರ್ಮಿಸಲಾಗಿತ್ತು. ತಳಿರು, ತೋರಣಗಳಿಂದ ಬಸವೇಶ್ವರ ವೃತ್ತವನ್ನು ಸಿಂಗರಿಸಲಾಗಿತ್ತು. ಬಸವೇಶ್ವರ ವೃತ್ತ ಹಿಂದೆ ಇದ್ದರೂ ಈಗ ಪುತ್ಥಳಿ ಪ್ರತಿಷ್ಠಾಪನೆಯಿಂದ ವೃತ್ತಕ್ಕೆ ವಿಶೇಷ ಮೆರುಗು ಬಂದಂತಾಗಿದೆ. ಈ ಎಲ್ಲದರ ಹಿಂದೆ ಪಾಲಿಕೆಯ ಹಾಲಿ, ಮಾಜಿ ಸದಸ್ಯರ ಶ್ರಮ ಅಡಗಿದೆ.

ಕಾರ್ಯಕ್ರಮದಲ್ಲಿ ಮಾತ
ನಾಡಿದ ಸಚಿವ ಕೆ.ಎಸ್‌.ಈಶ್ವರಪ್ಪ,
‘ಪ್ರತಿಯೊಬ್ಬರೂ ಜಾತಿ ಸಂಕೋಲೆ
ಗಳಿಂದ ಹೊರಬರಬೇಕಿದೆ. ಇದೇ ಬಸವಣ್ಣನವರ ತತ್ವ’ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಶರಣರ ವಚನಗಳು ಯಾವಾಗಲು ವರ್ತಮಾನದಲ್ಲೇ ಇರುತ್ತವೆ. ಜಿಲ್ಲೆಯಲ್ಲಿ ಒಂದು ಶರಣ ಪರಂಪರೆಯೇ ಇದೆ. ಇಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ಜಿಲ್ಲೆಗೆ ಶೋಭೆ ತಂದಿದೆ’ ಎಂದರು.

ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ‘ಬಸವ ತತ್ವಗಳು ಇಂದು ಲೋಕಪ್ರಿಯವಾಗುತ್ತಿವೆ. ಮನುಕುಲದ ಉದ್ಧಾರಕ್ಕಾಗಿ ಅನುಭವ ಮಂಟಪದ ಮೂಲಕ ಒಂದು ಸಾಮಾಜಿಕ ನ್ಯಾಯ ನೀಡಿದ ಬಸವಣ್ಣನವರ ವಿಚಾರಧಾರೆಗಳು ಎಂದಿಗೂ ಪ್ರಸ್ತುತವಾಗಿವೆ’ ಎಂದು ತಿಳಿಸಿದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಡಾ. ಮಹಾಂತ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಸ್ವಾಮಿ ವಿನಯಾನಂದ ಸರಸ್ವತಿ, ಅಭಿನವ ಚನ್ನಬಸವ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಆರ್. ಪ್ರಸನ್ನಕುಮಾರ್, ಎಸ್. ರುದ್ರೇಗೌಡ, ಕೆ.ಬಿ. ಅಶೋಕ್ ನಾಯ್ಕ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ್‌ ವಟಾರೆ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಪ್ರಮುಖರಾದ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ಎಸ್.ಎನ್. ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ವೈ.ಎಚ್. ನಾಗರಾಜ್ ಇದ್ದರು.

ಲಂಡನ್‌ನಿಂದ ಬಸವಣ್ಣನವರ ಪ್ರತಿಮೆ ತರಲು ಶ್ರಮಿಸಿದ ಮಾಜಿ ಮೇಯರ್ ಏಳುಮಲೈ ಹಾಗೂ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT