ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ: ಬೇಳೂರು

Published 6 ಅಕ್ಟೋಬರ್ 2023, 16:14 IST
Last Updated 6 ಅಕ್ಟೋಬರ್ 2023, 16:14 IST
ಅಕ್ಷರ ಗಾತ್ರ

ಸಾಗರ: ರಾಜ್ಯ ಸರ್ಕಾರ ಜಾರಿಗೊಳಿಸುವ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಶಿವಮೊಗ್ಗ ರಸ್ತೆಯಿಂದ ಸೊರಬ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ₹3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರವೂ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗ ರಸ್ತೆಯಿಂದ ಸೊರಬ ಬೈಪಾಸ್ ರಸ್ತೆ ನಡುವೆ ಚತುಷ್ಪಥ ರಸ್ತೆ ನಿರ್ಮಿಸಿ ಆಲಂಕೃತ ದೀಪಗಳನ್ನು ಅಳವಡಿಸಲಾಗುವುದು. ಇದರಿಂದಾಗಿ ನಗರ ವ್ಯಾಪ್ತಿಯ ವಾಹನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಸಂಚಾರ ವ್ಯವಸ್ಥೆ ಸುಗಮಗೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಾಗರ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಮೂಲ ಸೌರ್ಕಯವನ್ನು ಒದಗಿಸುವುದು ಆಡಳಿತದ ಆದ್ಯ ಕರ್ತವ್ಯವಾಗಿದೆ. ಸಂಚಾರ ದಟ್ಟಣೆ ನೀಗಿಸುವ ಸಲುವಾಗಿ ಬಳಸಗೋಡು ಗ್ರಾಮದಿಂದ ಜೋಗ ರಸ್ತೆಯ ಖಂಡಿಕಾ ಕ್ರಾಸ್‌ವರೆಗೆ ಬೈಪಾಸ್ ರಸ್ತೆ ನಿರ್ಮಿಸುವ ಯೋಜನೆಯಿದೆ ಎಂದು ಅವರು ಮಾಹಿತಿ ನೀಡಿದರು.

ಮಾರ್ಕೆಟ್ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ಮುಂದುವರೆಸಲಾಗುವುದು. ತ್ಯಾಗರ್ತಿ ವೃತ್ತದಿಂದ ಎಲ್. ಬಿ ಕಾಲೇಜು ವೃತ್ತದವರೆಗಿನ ಹೆದ್ದಾರಿ ವಿಸ್ತರಣೆಗೆ ಬಂದಿರುವ ತಕರಾರನ್ನು ಪರಿಗಣಿಸಲಾಗುವುದು. ರಿಲಯನ್ಸ್ ಬಂಕ್ ವೃತ್ತದಿಂದ ನಗರ ಪೊಲೀಸ್ ಠಾಣೆ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಮಾರ್ಜಿನ್ ಬಿಟ್ಟ ನಂತರವಷ್ಟೆ ವಿಸ್ತರಣೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ರೈಲ್ವೆ ಕ್ರಾಸಿಂಗ್ ಇರುವಲ್ಲಿ ಮೇಲ್ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಗರವ್ಯಾಪ್ತಿಯಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಉದ್ಯಾನವನಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ನಗರಸಭೆ ಸದಸ್ಯರಾದ ಮಂಡಗಳಲೆ ಗಣಪತಿ, ಮಧುಮಾಲತಿ, ಮಾಜಿ ಸದಸ್ಯ ಐ.ಎನ್.ಸುರೇಶ್ ಬಾಬು, ಅಶೋಕ್ ಬೇಳೂರು, ಲೋಕೋಪಯೋಗಿ ಇಲಾಖೆ ಅಭಿಯಂತರ ಮಂಜುನಾಥ್, ನಗರಸಭೆ ಪರಿಸರ ಅಭಿಯಂತರ ಮದನ್, ವಿಠ್ಠಲ್ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT