ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಚಿವರ ಕ್ಷೇತ್ರದಲ್ಲಿ ಬಿಜೆಪಿ ಖಾಲಿಯಾಗಲಿದೆ: ಮಾಜಿ ಸಚಿವ ಕಿಮ್ಮನೆ ರತ್ನಾಕರ

ಆರಗ ಜ್ಞಾನೇಂದ್ರ ತವರೂರು ಗುಡ್ಡೇಕೊಪ್ಪದಿಂದ ಕಾಂಗ್ರೆಸ್ ಬೃಹತ್‌ ಪಾದಯಾತ್ರೆಗೆ ಚಾಲನೆ
Last Updated 7 ಮೇ 2022, 3:20 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿಯನ್ನು ತೊಲಗಿಸಿ ಜನಸಾಮಾನ್ಯರ ಆಡಳಿತ ಜಾರಿಗೆ ಬರಲಿದೆ. ಕ್ಷೇತ್ರದಲ್ಲಿ ಬಿಜೆಪಿಯನ್ನು ಖಾಲಿ ಮಾಡುತ್ತೇವೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಭವಿಷ್ಯ ನುಡಿದರು.

ಆರಗ ಜ್ಞಾನೇಂದ್ರ ಅವರ ತವರೂರು ಗುಡ್ಡೇಕೊಪ್ಪದಿಂದ ಶಿವಮೊಗ್ಗದವರೆಗೆ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ಬೃಹತ್‌ 60 ಕಿ.ಮೀ. ಪಾದಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು.

ಪಿಎಸ್‌ಐ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಕಾರು ಎರಡು ದಿನ ತೀರ್ಥಹಳ್ಳಿಯಲ್ಲಿಯೇ ಇತ್ತು. ಸಾಕ್ಷ್ಯ ನಾಶಪಡಿಸಿದ ನಂತರ ನಾಟಕೀಯವಾಗಿ ಬಂಧಿಸಲಾಗಿದೆ ಎಂದು ಟೀಕಿಸಿದರು.

ಕೋಮು ಸೌಹಾರ್ದ ಹಾಳು ಮಾಡುವ ಶಿಕ್ಷಣ ಪಡೆದಿರುವ ಆರಗ ಜ್ಞಾನೇಂದ್ರ ಅವರು ಆರೋಪಿ ಮನೆಯಲ್ಲಿ ಚೌಚೌ ಬಾತ್ ತಿಂದು, ಆಕೆ ನಮ್ಮ ಪಕ್ಷದ ಕಾರ್ಯಕರ್ತೆ ಅಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ನ್ಯಾಯಯುತ ತನಿಖೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕಿಮ್ಮನೆ ಆಗ್ರಹಿಸಿದರು.

ಮೊದಲ ದಿನದ ಪಾದಯಾತ್ರೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಕಾಂಗ್ರೆಸ್‌ ಬಾವುಟ ನೀಡುವ ಮೂಲಕ ಕಾಂಗ್ರೆಸ್‌ ಮುಖಂಡೆ ಡಾ.ರಾಜನಂದಿನಿ ಕಾಗೋಡು ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡ ಆರ್.ಎಂ. ಮಂಜುನಾಥ ಗೌಡರ ಬೆಂಬಲಿಗರು ಪಾದಯಾತ್ರೆಯಲ್ಲಿ ಕಾಣಿಸಿಕೊಂಡರು. ಗುಡ್ಡೇಕೊಪ್ಪದಿಂದ ಹೊರಟ ಪಾದಯಾತ್ರೆ ಹೊದಲ, ಕುಡುಮಲ್ಲಿಗೆ, ಬೆಜ್ಜವಳ್ಳಿ ತಲುಪಿದೆ. ಪಾದಯಾತ್ರೆ ನಡುವೆ ಸಭೆ ನಡೆಯಿತು.

ಪಾದಯಾತ್ರೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ಗೀತಾ, ಸುಶೀಲ, ಕೆಪಿಸಿಸಿ ಸದಸ್ಯ ಜಿ.ಎಸ್.‌ ನಾರಾಯಣ ರಾವ್‌, ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಅನಿತಾ ಕುಮಾರಿ, ವಿಧಾನಪರಿಷತ್‌ ಮಾಜಿ ಸದಸ್ಯ ಪ್ರಫುಲ್ಲ ಮಧುಕರ್‌, ಬ್ಲಾಕ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಐವೈಸಿ ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ದುಗ್ಗಪ್ಪಗೌಡ, ಡಿ.ಎಸ್.‌ ವಿಶ್ವನಾಥ ಶೆಟ್ಟಿ, ಕಟ್ಟೇಹಕ್ಕಲು ಕಿರಣ್‌, ಕೆಳಕೆರೆ ದಿವಾಕರ್‌, ನಾಬಳ ಶಚೀಂದ್ರ ಹೆಗ್ಡೆ, ಮಂಗಳ ಗೋಪಿ, ಹುಲ್ಲತ್ತಿ ದಿನೇಶ್‌, ವಿನಾಯಕ ಆಚಾರ್‌, ಪೂರ್ಣೇಶ್‌ ಕೆಳಕೆರೆ ಇದ್ದರು.

ಮಂಜುನಾಥ ಗೌಡ ಗೈರುಹಾಜರಿ

ಪಾದಯಾತ್ರೆಯಲ್ಲಿ ಕಾಂಗ್ರೆಸ್‌ ಮುಖಂಡ ಆರ್.ಎಂ. ಮಂಜುನಾಥ ಗೌಡ ಗೈರು ಹಾಜರಾಗಿದ್ದರು. ಪಾದಯಾತ್ರೆ ಅಂಗವಾಗಿ ಕಾಂಗ್ರೆಸ್‌ ವತಿಯಿಂದ ಹಾಕಿದ್ದ ಫ್ಲೆಕ್ಸ್‌ಗಳಲ್ಲಿಯೂ ಗೌಡರ ಭಾವಚಿತ್ರ ಇರಲಿಲ್ಲ.

ಗರಂ ಆದ ಕಿಮ್ಮನೆ: ಮೆರವಣಿಗೆ ರೂಪುರೇಷೆಯಂತೆ ಗುಡ್ಡೇಕೊಪ್ಪದ ಗೃಹಸಚಿವ ಆರಗ ಜ್ಞಾನೇಂದ್ರ ಮನೆ ಮುಂಭಾಗ ಮೌನ ಪ್ರತಿಭಟನೆ ಇತ್ತು. ಈ ಸಂದರ್ಭದಲ್ಲಿ ಹುಡುಗರು ನಾಸಿಕ ಬ್ಯಾಂಡ್‌ ಬಾರಿಸಲು ಮುಂದಾದರು. ತಕ್ಷಣ ಗರಂ ಆದ ಕಿಮ್ಮನೆ ಬ್ಯಾಂಡ್‌ ಬಾರಿಸುವವರಿಗೆ ವಾಪಸ್‌ ಕಳುಹಿಸುವುದಾಗಿ ಬೆದರಿಸಿದರು.

***

ಪಿಎಸ್‌ಐ ಹಗರಣದಿಂದ ನಮ್ಮೂರಿನ ಬಡ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈಶ್ವರಪ್ಪ ವಿರುದ್ಧದ ಆರೋಪ ತನಿಖೆಯಾಗಬೇಕು. ಕಾಂಗ್ರೆಸ್‌ ಜನಪರ ಯೋಜನೆಗಳ ಕುರಿತು ಸಾಮೂಹಿಕ ಅಧ್ಯಯನ ನಡೆಯಬೇಕಿದೆ.

ಡಾ.ರಾಜನಂದಿನಿ ಕಾಗೋಡು, ಕಾಂಗ್ರೆಸ್‌ ಮುಂಖಡರು

***

ಅರಣ್ಯ, ಭೂ–ಗಣಿ, ಕಂದಾಯ, ಪೊಲೀಸ್‌ ಇಲಾಖೆ ಬಿಜೆಪಿ ಕಚೇರಿಯಾಗಿದೆ. ಮರಳು ಕ್ವಾರಿಗಳಲ್ಲಿ 24 ಗಂಟೆ ಬಿಜೆಪಿಯವರಿಗೆ ಪರವಾನಗಿ ದೊರೆಯುತ್ತಿದೆ. ಸುಳ್ಳು ಪ್ರಕರಣಗಳಿಂದಾಗಿ ವಿರೋಧ ಪಕ್ಷದ ಯಾವುದೇ ಸದಸ್ಯರು ಬದುಕುವ ಹಾಗಿಲ್ಲ.

ಕಿಮ್ಮನೆ ರತ್ನಾಕರ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT