ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬದಲ್ಲಿ ಭೂಮಿ ಹುಣ್ಣಿಮೆ ಸಡಗರ: ಎತ್ತಿನಗಾಡಿಯಲ್ಲಿ ಹೊಲಕ್ಕೆ ತೆರಳಿ ಪೂಜೆ

Last Updated 21 ಅಕ್ಟೋಬರ್ 2021, 8:25 IST
ಅಕ್ಷರ ಗಾತ್ರ

ಸೊರಬ: ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಭೂತಾಯಿಗೆ ಉಡಿ ತುಂಬುವ ಸೀಗೆಹುಣ್ಣಿಮೆಯನ್ನು ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಬುಧವಾರ ರೈತರು ಸಡಗರದಿಂದ ಆಚರಿಸಿದರು.

ಎತ್ತಿನ ಗಾಡಿ, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳನ್ನು ಶೃಂಗರಿಸಿ ಹೊಲಕ್ಕೆ ತೆರಳಿ ಅಲ್ಲಿ ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.

ಮುಂಜಾನೆ ಗದ್ದೆ ಹೊಲಗಳಿಗೆ ತೆರಳಿ ವಿವಿಧ ಸೊಪ್ಪು, ತರಕಾರಿ ಮಿಶ್ರಿತ ಚರಗವನ್ನು ಚೆಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು. ಭೂಮಿಯನ್ನು ಹೆಣ್ಣಿನಂತೆ ಗೌರವಿಸಿ, ಗರ್ಭಿಣಿಗೆ ಸೀಮಂತ ಮಾಡುವಂತೆ, ತೆನೆಯೊಡೆಯುವ ಬೆಳೆಗೆ ಕೃಷಿ ಕುಟುಂಬಗಳು ಪೂಜೆ ಸಲ್ಲಿಸಿ ಎಡೆ ಅರ್ಪಿಸುವ ಸಂಪ್ರದಾಯ ಮಲೆನಾಡ ಭಾಗದಲ್ಲಿದೆ.

ಮುಂಜಾನೆಯೇ ಅಲಂಕೃತ ಭೂಮಣ್ಣಿ ಬುಟ್ಟಿಯಲ್ಲಿ ಚರಗವನ್ನು ತುಂಬಿಕೊಂಡು ರೈತರು ‘ಹಚ್ಚಂಬ್ಲಿ ಹರಬಿಸೊಪ್ಪು ಹಿತ್ತಲಾಗಿರೋ ದಾರಿರೆಕಾಯಿ ಭೂಂಕವ್ವನ ಬಯ್ಕೆಬಾನ ಎದ್ದೆದ್ ಉಣ್ಣೆ ಭೂಂಕವ್ವೋ.. ಹೋಯ್ ಹೋಯ್’ ಎಂದು ಕೂಗುತ್ತಾ ಹೊಲಕ್ಕೆಲ್ಲಾ ಚೆಲ್ಲಿ ಸಂಭ್ರಮಪಟ್ಟರು.

ಮಧ್ಯಾಹ್ನ ಕುಟುಂಬದವರೆಲ್ಲರೂ ಬೆಳೆಗೆ ಸೀರೆ-ಕುಬಸ, ತಾಳಿ, ಮೂಗುತಿ ತೊಡಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಯೇ ಊಟ ಮಾಡಿದರು. ಬೆಳೆಗೆ, ಗೂಳಿ (ಕಾಗೆ)ಗೆ, ಇಲಿಗಳಿಗೆ ಒಂದೊಂದು ಎಡೆ ನೀಡಿದರು. ಒಂದು ಕೊಟ್ಟೆ ಕಡುಬನ್ನು ಜಮೀನಿನಲ್ಲಿ ಹೂತು, ಆ ಜಮೀನಿನ ಬೆಳೆಯನ್ನು ಒಕ್ಕಲು ಮಾಡುವ ಸಂದರ್ಭದಲ್ಲಿ ಕಿತ್ತು ತಿನ್ನುವ ಸಂಪ್ರದಾಯ ಮಲೆನಾಡಿನ ಭಾಗದಲ್ಲಿ ಜನಪ್ರಿಯವಾಗಿದೆ.

ಸೀಗೆಹುಣ್ಣಿಮೆಗೆ ವಿಶೇಷವಾಗಿ ಹೋಳಿಗೆ, ಕೊಟ್ಟೆಕಡುಬು, ಸಿಹಿ ಕಡುಬು, ಸಾಂಬಾರು ಬುತ್ತಿ, ಕಜ್ಜಾಯ, ಹುಳಿ ಚಿತ್ರಾನ್ನ, ಮೊಸರಿನ ಬುತ್ತಿ, ಕರ್ಚಿಕಾಯಿ, ರೊಟ್ಟಿ, ಕಟಕಲು ರೊಟ್ಟಿ, ಪುಂಡಿ ಪಲ್ಯೆ, ಎಣಗಾಯಿ ಪಲ್ಯೆ, ಕಿಚಡಿ, ಅಕ್ಕಿಹುಗ್ಗಿ, ಚೆಟ್ನಿ, ಕರಿಂಡಿ, ಇತ್ಯಾದಿ ಭಕ್ಷ್ಯಗಳನ್ನು ತಯಾರಿಸಿ ಮನೆಯ ಮಂದಿಯ ಜೊತೆಗೆ ಸುತ್ತಮುತ್ತಲಿನ ಜನರನ್ನು ಕರೆದುಕೊಂಡು ಹೊಲಗಳಿಗೆ ತೆರಳಿ ಭೋಜನ ಮಾಡಿದರು.

ಹೊಲ, ಗದ್ದೆ, ತೋಟಗಳಲ್ಲಿ ಫಸಲು ಉತ್ತಮವಾಗಿ ಬರಲಿ, ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ರೈತರು ಭೂ ತಾಯಿಯನ್ನು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT