ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾವಧಿ ಶಿಕ್ಷೆ ತೀರ್ಪು ಎತ್ತಿ ಹಿಡಿದ ಹೈಕೋರ್ಟ್

ಸಾಗರದ ನ್ಯೂ ಬಿಎಚ್ ರಸ್ತೆಯ ಶರಾವತಿ ಕೂಲ್ ಡ್ರಿಂಕ್ಸ್ ಎದುರು ನಡೆದ ಕೊಲೆ ಪ್ರಕರಣ
Last Updated 1 ಅಕ್ಟೋಬರ್ 2022, 4:44 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ನ್ಯೂ ಬಿಎಚ್ ರಸ್ತೆಯ ಶರಾವತಿ ಕೂಲ್ ಡ್ರಿಂಕ್ಸ್ ಎದುರು 2015ರ ಮಾರ್ಚ್ 20ರಂದು ರಾತ್ರಿ 8ರ ವೇಳೆಗೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಹಣಕಾಸಿನ ವಿಚಾರದಲ್ಲಿ ಉಂಟಾದ ವೈಷಮ್ಯದ ಕಾರಣ ಇಲ್ಲಿನ ನೆಹರೂ ನಗರ ಬಡಾವಣೆಯ ಹಸೈನರ್ ಎಂಬಾತನ ಮೇಲೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ ಮಹಮ್ಮದ್ ಅಲಿ, ಇಸ್ಮಾಯಿಲ್, ಪ್ರತಾಪ್ ಸಿಂಗ್, ರಾಕೇಶ್, ಇಮ್ರಾನ್, ಬೊಮ್ಮ, ಶಾಹಿದ್, ರಶೀದ್ ಎಂಬುವವರು ತಲವಾರ್, ಮಚ್ಚುಗಳಿಂದ ಜನನಿಬಿಡ ರಸ್ತೆಯಲ್ಲೇ ಸಿನಿಮೀಯ ಮಾದರಿಯಲ್ಲಿ ತೀವ್ರ ಹಲ್ಲೆ ನಡೆಸಿದ್ದರು.

ಕೊಲೆಯ ನಂತರ ಆರೋಪಿಗಳು ಬೈಕ್‌ನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮಚ್ಚು, ತಲವಾರ್ ಜಳಪಿಸುತ್ತ ಸಾಗಿದ್ದು ನಗರದ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಹಸೈನರ್‌ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟಿದ್ದರು.

ಪ್ರಕರಣದಲ್ಲಿ ಒಬ್ಬ ಆರೋಪಿ ಅಪ್ರಾಪ್ತನಾದ ಕಾರಣ ಆತನ ವಿಚಾರಣೆ ಶಿವಮೊಗ್ಗದ ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗದೆ ಬಿಡುಗಡೆ ಮಾಡಲಾಗಿತ್ತು. ಉಳಿದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ತೀರ್ಪನ್ನು ಮಹಮ್ಮದ್ ಅಲಿ ಹಾಗೂ ಶಾಹಿದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಿ ತಡೆಯಾಜ್ಞೆ ಪಡೆದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇಲ್ಲಿನ ನ್ಯಾಯಾಲಯ ನೀಡಿರುವ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ಕಾರಣ ಮಹ್ಮಮದ್ ಅಲಿ ಹಾಗೂ ಶಾಹಿದ್ ಅವರನ್ನು ಶುಕ್ರವಾರ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳು ಈಗಾಗಲೇ ಧಾರವಾಡದ ಕಾರಾಗೃಹದಲ್ಲಿ ಜೈಲು ವಾಸದಲ್ಲಿದ್ದಾರೆ.

ಮಕ್ಕಳ ಅಪಹರಣಕಾರ ಎಂದು ಭಾವಿಸಿ ಹಲ್ಲೆ

ಭದ್ರಾವತಿ: ಕ್ಷೌರ ಮಾಡಿಸಿಕೊಳ್ಳಲು ಗ್ರಾಮಕ್ಕೆ ಬಂದಿದ್ದ ಯುವಕರನ್ನು ಮಕ್ಕಳ ಅಪಹರಣಕಾರ ಎಂದು ಭಾವಿಸಿ ಗ್ರಾಮಸ್ಥರು ಹಿಡಿದು ಹಲ್ಲೆ ಮಾಡಿರುವ ಘಟನೆ ವೀರಾಪುರ ತಿಲಕ್ ನಗರದಲ್ಲಿ ಶುಕ್ರವಾರ ನಡೆದಿದೆ.

ಹೊಸಮನೆ ಯುವಕನೊಬ್ಬ ಕ್ಷೌರ ಮಾಡಿಸಿಕೊಳ್ಳಲು ಗ್ರಾಮಕ್ಕೆ ಬಂದಿದ್ದು, ಆತನ ಓಡಾಟ ಗಮನಿಸಿ ಅನುಮಾನಗೊಂಡ ಕೆಲವರು ಆತನನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಕೂಡಲೇ ವಿಚಾರ ತಿಳಿದ ಗ್ರಾಮಾಂತರ ಪೊಲೀಸರು ಆ ಯುವಕನನ್ನು ರಕ್ಷಿಸಿ ಪೂರ್ವಾಪರ ವಿಚಾರಿಸಿದ ನಂತರ ಅವರ ಸಂಬಂಧಿಗಳಿಗೆ ಒಪ್ಪಿಸಿದ್ದಾರೆ.

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಮಕ್ಕಳ ಅಪಹರಣ ಘಟನೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಂದೂಕು ಕಳವು ದೂರು ದಾಖಲು

ತೀರ್ಥಹಳ್ಳಿ: ಮನೆಯಲ್ಲಿಟ್ಟ ನಾಡಬಂದೂಕು ಕಳುವಾಗಿರುವ ಪ್ರಕರಣ ಮಂಡಗದ್ದೆ ಹೋಬಳಿಯ ಪುಟೋಡ್ಲು ಗ್ರಾಮದಲ್ಲಿ ನಡೆದಿದೆ.

ವೃದ್ಧ ಎಚ್.ಟಿ.ರಾಮಕೃಷ್ಣ ಅವರ ಬಂದೂಕು ಕಳವಾಗಿದ್ದು ಗ್ರಾಮದಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನದ ಮಾಂಸ ಮಾರುತ್ತಿದ್ದ ವ್ಯಕ್ತಿ ಬಂಧನ

ಭದ್ರಾವತಿ: ದನದ ಮಾಂಸವನ್ನು ಪ್ಯಾಕೇಟ್ ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಚನ್ನಗಿರಿ ಉಪ್ಪಾರ್ ಮೊಹಲ್ಲಾ ನಿವಾಸಿ ಮೊಹಮದ್ ಸಲೀಂ (25) ಬಂಧಿತ ವ್ಯಕ್ತಿ.

ಕೆಲವು ದಿನಗಳಿಂದ ಸಿದ್ದಾಪುರ ಬಸಲೀಕಟ್ಟೆ ಭಾಗದಲ್ಲಿ ಪ್ಯಾಕ್ ಮಾಡಿದ ದನದ ಮಾಂಸ ತಲುಪಿಸುತ್ತಿದ್ದ ಆರೋಪಿಯನ್ನು ಶುಕ್ರವಾರ ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT