ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೇಳೂರು ಗೆಲುವು ಅಕ್ರಮ: ರತ್ನಾಕರ್ ಹೊನಗೋಡು ಆರೋಪ

Published 2 ಜುಲೈ 2024, 14:17 IST
Last Updated 2 ಜುಲೈ 2024, 14:17 IST
ಅಕ್ಷರ ಗಾತ್ರ

ಆನಂದಪುರ: ಈಚೆಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಕ್ರಮ ಮಾರ್ಗದಲ್ಲಿ ಗೆಲವು ಸಾಧಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಆರೋಪಿಸಿದ್ದಾರೆ. 

ಆನಂದಪುರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಸಹಕಾರ ಸಂಘಗಳನ್ನು ಕಟ್ಟಿ ಬೆಳೆಸಿದವರೇ ಸ್ಪರ್ಧಿಸುತ್ತಿದ್ದ ವಾಡಿಕೆಯಿತ್ತು. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಅಂತಹವರ ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ ತಮಗೆ ಸದಸ್ಯತ್ವ ಇಲ್ಲದಿದ್ದರೂ, ಮಾಲ್ವೆಯ ಸಹಕಾರ ಸಂಘದ ನಿರ್ದೇಶಕರಿಂದ ರಾಜೀನಾಮೆ ಕೊಡಿಸಿ, ತೆರವಾದ ಸದಸ್ಯತ್ವ ಸ್ಥಾನವನ್ನು ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಎಷ್ಟು ಸರಿ’ ಎಂದು ಪ್ರಶ್ನೆ ಮಾಡಿದರು.

‘ಹಲವು ಆಕಾಂಕ್ಷಿಗಳು ಇದ್ದರೂ ಅವರೆಲ್ಲರನ್ನೂ ಬೆದರಿಸಿದ್ದಾರೆ. ನಾನು ಶಾಸಕನಾಗಿದ್ದು, ನನಗೆ ಮತ ಹಾಕಿ ಅವಿರೋಧವಾಗಿ ಗೆಲ್ಲಿಸಬೇಕು ಎಂದು ಎಚ್ಚರಿಕೆ ನೀಡಿ ಆಕಾಂಕ್ಷಿಗಳು ನಾಮಪತ್ರ ಹಾಕದಂತೆ ನೋಡಿಕೊಂಡಿದ್ದಾರೆ’ ಎಂದು ಬೇಳೂರು ವಿರುದ್ಧ ಆರೋಪ ಮಾಡಿದರು.

‘ಬೇಳೂರು ಅವರಿಗೆ ಸಹಕಾರ ಕ್ಷೇತ್ರದಲ್ಲಿ ಅನುಭವವಿಲ್ಲ ಎನ್ನುವ ಕಾರಣಕ್ಕಾಗಿ ನನಗೆ ಹಲವರು ಬೆಂಬಲ ನೀಡಿದ್ದರು. ಅನುಭವ ಇಲ್ಲದವರ ಕೈಯಲ್ಲಿ ಕ್ಷೇತ್ರ ಬಡವಾಗಬಾರದು ಎನ್ನುವ ಉದ್ದೇಶಕ್ಕಾಗಿ ಹಲವು ಮುಖಂಡರ ಒತ್ತಾಯದ ಮೆರೆಗೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೆನೇ ವಿನಾ ಯಾವುದೇ ರಾಜಕೀಯ ಉದ್ದೇಶ ಹೊಂದಿರಲಿಲ್ಲ’ ಎಂದು ರತ್ನಾಕರ್ ಸ್ಪಷ್ಟಪಡಿಸಿದ್ದರು.

ರೆಸಾರ್ಟ್ ರಾಜಕೀಯದಿಂದ ಗೆಲುವು:

‘ಶಾಸಕರಿಗೆ ಸೋಲಿನ ಭಯ ಇತ್ತು. ಹೀಗಾಗಿ ಚುನಾವಣೆಯ ಮೊದಲು 26 ಮತದಾರರನ್ನು ಅಧಿಕಾರಿಗಳ ಮೂಲಕ ಹೆದರಿಸಿ ರೆಸಾರ್ಟ್ ಹಾಗೂ ಹೋಟೆಲ್‌ನಲ್ಲಿ ಇರಿಸಿದ್ದರು. ಅವರಿಗೆ  ಹಣಬಲ, ಅಧಿಕಾರ ಬಲ ಇದ್ದರೂ, 30 ಮತಗಳ ಪೈಕಿ 14 ಮತಗಳು ನಮ್ಮ ಮೇಲಿನ ಅಭಿಮಾನದಿಂದ ನನಗೆ ಚಲಾವಣೆಯಾಗಿವೆ. ಇದನ್ನು ಗಮನಿಸಿದರೆ, ಅವರಿಗಿರುವ ಬೆಂಬಲ ಎಷ್ಟಿದೆ ಎಂಬುವುದು ತಿಳಿಯುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು.

ನ್ಯಾಯಾಲಯಕ್ಕೆ ಮೊರೆ: 

‘ಮತದಾರರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆಹಚ್ಚಲು ದಬ್ಬಾಳಿಕೆ ನಡೆಸಿ ಎರಡು, ಮೂರು ಕಡೆ ಸೀಲ್ ಹಾಕಿಸಲಾಗಿದೆ. ಎರಡು ಮೂರು ಕಡೆ ಸಿಲ್ ಹಾಕಿದ ಮತಗಳನ್ನು ಜಿಲ್ಲಾಧಿಕಾರಿ ತಿರಸ್ಕರಿಸಿ ಮರು ಎಣಿಕೆ ಮಾಡಬೇಕು. ಶಾಸಕರು ನೈತಿಕತೆಯಿಂದ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೊಗಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಆನಂದಪುರ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭರ್ಮಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ರೇವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT