ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಡೆಂಗಿ: ನಿಯಂತ್ರಣಕ್ಕೆ ಕ್ರಮ

ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮಧುರಾ ಶಿವಾನಂದ್
Last Updated 31 ಜುಲೈ 2022, 5:51 IST
ಅಕ್ಷರ ಗಾತ್ರ

ಸಾಗರ: ನಗರ ವ್ಯಾಪ್ತಿಯಲ್ಲಿ ಮಳೆ ಹಾಗೂ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ಡೆಂಗಿ ಹೆಚ್ಚಲು ಕಾರಣವಾಗಿದೆ. ಆರೋಗ್ಯ ಇಲಾಖೆ ಪ್ರಮುಖರೊಂದಿಗೆ ಚರ್ಚಿಸಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಜ್ವರ ನಿಯಂತ್ರಣಕ್ಕೆ ನಗರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ತಿಳಿಸಿದರು.

ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ನಗರದಲ್ಲಿ ಜೂನ್‌ನಲ್ಲಿ 16 ಹಾಗೂ ಜುಲೈನಲ್ಲಿ 15 ಡೆಂಗಿ ಪ್ರಕರಣಗಳು ವರದಿಯಾಗಿವೆ. ಈಗ ಮಳೆಯ
ಪ್ರಮಾಣ ಕಡಿಮೆಯಾಗಿದ್ದು, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆ ಸ್ವಚ್ಛತಾ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಲಿದ್ದಾರೆ ಎಂದರು.

ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ನಗರಸಭೆ ಜಾಗ ಒತ್ತುವರಿ ಪ್ರಕರಣ ಹಾಗೂ ಪೌರ ಕಾರ್ಮಿಕರಿಗೆ ಕಳಪೆ ಸಾಮಾಗ್ರಿ ವಿತರಿಸಿರುವ ವಿಷಯದ ಕುರಿತು ಕಾಂಗ್ರೆಸ್ ಸದಸ್ಯೆ ಎನ್. ಲಲಿತಮ್ಮ ಸಭೆಯ ಗಮನ ಸೆಳೆದರು.

‘ನಗರಸಭೆ ಜಾಗವನ್ನು ಎಷ್ಟೇ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು.ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಪೌರಕಾರ್ಮಿಕರಿಗೆ ಪೂರೈಸಿರುವ ವಸ್ತುಗಳು ಕಳಪೆಯಾಗಿದೆ ಎಂಬ ದೂರು ಬಂದಿದ್ದು, ಗುತ್ತಿಗೆದಾರರಿಗೆ ಈಗಾಗಲೇ ಎಚ್ಚರಿಕೆನೀಡಲಾಗಿದೆ’ ಎಂದು ಅಧ್ಯಕ್ಷರು ಹೇಳಿದರು.

‘ನಾಮ ನಿರ್ದೇಶನ ಸದಸ್ಯರು ಕೇವಲ ಸಲಹೆ ಕೊಡುವುದನ್ನು ಬಿಟ್ಟು ಎಲ್ಲಾ ವಿಷಯಗಳಿಗೂ ಮೂಗು ತೂರಿಸುತ್ತಾರೆ’ ಎಂದು ಸದಸ್ಯರಾದ ಎನ್. ಲಲಿತಮ್ಮ, ಮಧು ಮಾಲತಿ, ಸೈಯದ್ ಜಾಕೀರ್ ಆಕ್ಷೇಪ ವ್ಯಕ್ತಪಡಿಸಿದ್ದು, ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತು.

‘ನಾಮ ನಿರ್ದೇಶನ ಸದಸ್ಯರಿಗೆ ಅವಮಾನವಾಗುವ ರೀತಿಯಲ್ಲಿ ವಿರೋಧ ಪಕ್ಷದ ಸದಸ್ಯರು
ಮಾತನಾಡುತ್ತಿದ್ದಾರೆ. ನಮ್ಮನ್ನು ಅವಮಾನಿಸಿದರೆ ಅದು ಸರ್ಕಾರವನ್ನು ಅವಮಾನಿಸಿದಂತೆ. ಮತದಾನದ
ಹಕ್ಕು ಇಲ್ಲ ಎನ್ನುವುದನ್ನು ಹೊರತುಪಡಿಸಿ ನಮಗೆ ಇತರ ಸದಸ್ಯರಿಗೆ ಇರುವ ಎಲ್ಲಾ ರೀತಿಯ ಹಕ್ಕುಬಾಧ್ಯತೆಗಳು ಇವೆ’ ಎಂದು ನಾಮನಿರ್ದೇಶನ ಸದಸ್ಯ ಸಂತೋಷ್ ಆರ್.ಶೇಟ್ ಸಮರ್ಥಿಸಿಕೊಂಡರು.

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಪೌರಾಯುಕ್ತ ರಾಜು ಡಿ.ಬಣಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT